



ಡೈಲಿ ವಾರ್ತೆ: 10/MAY/2025


ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ಪಾಕ್ ದಾಳಿ ನಡೆಸುತ್ತಿದೆ: ಕರ್ನಲ್ ಸೋಫಿಯಾ ಖುರೇಷಿ

ನವದೆಹಲಿ/ಜಮ್ಮು: ಪಾಕಿಸ್ತಾನ ಸಶಸ್ತ್ರ ಪಡೆಗಳು ಶ್ರೀನಗರ, ಆವಂತಿಪುರ ಮತ್ತು ಉಧಂಪುರ ವಾಯುನೆಲೆಗಳಲ್ಲಿರುವ ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಇದು ಜನವಸತಿ ಪ್ರದೇಶದ ಮೇಲೆ ದಾಳಿ ಮಾಡುವ ಮೂಲಕ ಪಾಕ್ ತನ್ನ ಬೇಜವಾಬ್ದಾರಿ ಪ್ರವೃತ್ತಿ ತೋರಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು. ವಿದೇಶಾಂಗ ಸಚಿವಾಲಯ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನ ಸೇನೆಯು ಗಡಿ ಪ್ರದೇಶಗಳಿಗೆ ತನ್ನ ಸೈನಿಕರನ್ನು ನಿಯೋಜಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪಾಕಿಸ್ತಾನದ ಸೇನಾ ಪಡೆಗಳು ಇಡೀ ಪಶ್ಚಿಮ ಭಾಗದಲ್ಲಿ ಆಕ್ರಮಣಕಾರಿ ಪ್ರವೃತ್ತಿ ಮುಂದುವರೆಸಿವೆ. ಭಾರತೀಯ ಸೇನೆ ಚೆಕ್ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡು ಯುಸಿಎಪಿ ಡ್ರೋನ್‌ಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದರು.
ದೇವಸ್ಥಾನ, ಜನ ವಸತಿ ಪ್ರದೇಶಗಳ ಮೇಲೆ ದಾಳಿ: ಪಾಕಿಸ್ತಾನ ಶನಿವಾರವೂ ದಾಳಿಯನ್ನು ಮುಂದುವರೆಸಿದೆ. ಜಮ್ಮುವಿನ ಶಂಭು ದೇವಸ್ಥಾನ ಮತ್ತು ಇತರ ಜನ ವಸತಿ ಪ್ರದೇಶಗಳು ಸೇರಿದಂತೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ರಾತ್ರಿಯಿಡೀ ಡ್ರೋನ್ ದಾಳಿಗೆ ಯತ್ನಿಸಿದ್ದು, ಇದು ನಾಗರಿಕರು ಮತ್ತು ಧಾರ್ಮಿಕ ಸ್ಥಳಗಳಿಗೆ ಅಪಾಯವನ್ನುಂಟುಮಾಡಿತ್ತು. ಆದರೆ ಭಾರತೀಯ ಸಶಸ್ತ್ರ ಪಡೆಗಳು ತೀವ್ರ ನಿಗಾವಹಿಸಿವೆ ಮತ್ತು ರಾಷ್ಟ್ರದ ಸಾರ್ವಭೌಮತ್ವ ರಕ್ಷಿಸಲು ಬದ್ಧವಾಗಿವೆ ಎಂದು ರಕ್ಷಣಾ ಸಚಿವಾಲಯ ಎಕ್ಸ್’ ಪೋಸ್ಟ್ ಮಾಡಿದೆ.
ಪಾಕಿಸ್ತಾನದ ಗಡಿಯಾಚೆಗಿನ ಶೆಲ್ ದಾಳಿಯು ಕುಪ್ವಾರಾ, ಉರಿ ಮತ್ತು ಪೂಂಚ್‌ನಲ್ಲಿರುವ ಮನೆಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಹಾನಿಯನ್ನುಂಟು ಮಾಡಿದೆ. ಪೂಂಚ್ ನಿವಾಸಿ ಬಲ್ಬೀರ್ ಸಿಂಗ್ ಮಾತನಾಡಿ, ಇಡೀ ಮನೆ ಹಾನಿಗೊಳಗಾಗಿದೆ. ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಪಾಕಿಸ್ತಾನದ ಜನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಪಾಕ್ ಉದ್ದೇಶಪೂರ್ವಕವಾಗಿ ಪೂಂಚ್ ಗುರಿಯಾಗಿಸಿಕೊಂಡಿದೆ. ಗುರುದ್ವಾರ, ದೇವಾಲಯಗಳು ಮತ್ತು ಮಸೀದಿಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದೇ ಪಾಕಿಸ್ತಾನದ ಯೋಜನೆಯಾಗಿದೆ. ಜನರು ಭಯಭೀತರಾಗಿದ್ದಾರೆ. ಆದರೆ, ಅವರು ಇಲ್ಲಿಯೇ ವಾಸಿಸುತ್ತಾರೆ ಮತ್ತು ಭಾರತೀಯ ಸೇನೆಯೊಂದಿಗೆ ನಿಲ್ಲುತ್ತಾರೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್ ವರೆಗೆ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶುಕ್ರವಾರ ರಾತ್ರಿ ಮತ್ತೆ ಡ್ರೋನ್ ದಾಳಿ ನಡೆಸಿದೆ. ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಗ್ರೋಟಾ ಮತ್ತು ಜಮ್ಮು, ಪಂಜಾಬ್‌ನ ಫಿರೋಜ್‌ಪುರ, ಪಠಾಣ್‌ಕೋಟ್ ಮತ್ತು ಫಾಜಿಲ್ಕಾ, ರಾಜಸ್ಥಾನದ ಲಾಲ್‌ಗಢ್ ಜಟ್ಟಾ, ಜೈಸಲ್ಮೇರ್ ಮತ್ತು ಬಾರ್ಮರ್ ಮತ್ತು ಗುಜರಾತ್‌ನ ಭುಜ್, ಕುವಾರ್ಬೆಟ್ ಮತ್ತು ಲಖಿ ನಲಾ ಮೇಲೂ ಪಾಕ್ ಡ್ರೋನ್ ದಾಳಿಗೆ ಯತ್ನಿಸಿದೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ, ಪಾಕಿಸ್ತಾನದ ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ), ಮುರಿಯ್ (ಚಕ್ವಾಲ್) ಮತ್ತು ರಫೀಕಿ (ಜಾಂಗ್ ಜಿಲ್ಲೆಯ ಶೋರ್ಕೋಟ್) ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ.