ಡೈಲಿ ವಾರ್ತೆ: 11/MAY/2025

ಆಪರೇಷನ್‌ ಸಿಂಧೂರ- ಹುತಾತ್ಮ ವೀರ ಯೋಧನಿಗೆ ಭಾವುಕ ವಿದಾಯ: ಕಣ್ಣೀರಿಟ್ಟ ಕುಟುಂಬಸ್ಥರು

ಅಮರಾವತಿ: ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಅಗ್ನಿವೀರ್ ಮುದವತ್ ಮುರಳಿ ನಾಯಕ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಅವರ ಹುಟ್ಟೂರು ಕಲ್ಲಿ ಥಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಗೋರಂಟ್ಲಾ ಮಂಡಲದ ಕಲ್ಲಿ ಥಂಡಾ ಗ್ರಾಮದ 23 ವರ್ಷದ ಸೈನಿಕ ಶುಕ್ರವಾರ ನಸುಕಿನ 2 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಮೀಸಲು ಪ್ರದೇಶದಲ್ಲಿ ‘ಆಪರೇಷನ್ ಸಿಂಧೂರ’ ಭಾಗವಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದರು.

ಶನಿವಾರ ರಾತ್ರಿ ಮುರಳಿ ಅವರ ಪಾರ್ಥಿವ ಶರೀರ ಹುಟ್ಟೂರಿಗೆ ತಲುಪಿತು. ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧನಿಗೆ ಇಡೀ ಗ್ರಾಮವೇ ಕಂಬನಿ ಮಿಡಿದು ಗೌರವ ಸಲ್ಲಿಸಿತು. ಯೋಧನ ಪಾರ್ಥಿವ ಶರೀರವನ್ನು ಗುಮ್ಮಯ್ಯಗರಿಪಲ್ಲಿ ಕ್ರಾಸ್‌ನಿಂದ ಕಲ್ಲಿ ತಾಂಡಾದವರೆಗೆ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ನೆರೆದಿದ್ದ ಜನ ಪುಷ್ಪನಮನ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು. ‘ಭಾರತ್ ಮಾತಾ ಕಿ ಜೈ’, ‘ಮುರಳಿ ನಾಯಕ್ ಅಮರ್ ರಹೇ’ ಎಂದು ಜನರು ಘೋಷಣೆ ಕೂಗಿ ಗೌರವ ಸಮರ್ಪಿಸಿದರು. ಯೋಧನ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪುತ್ರನ ಮೊಗವನ್ನು ಕಂಡು ತಾಯಿ ಜ್ಯೋತಿ ಬಾಯಿ ದುಃಖಿಸಿದರು. ಕುಟುಂಬದ ಸದಸ್ಯರು ಕಣ್ಣೀರಿಟ್ಟರು. ಈ ವೇಳೆ ಸ್ಥಳದಲ್ಲಿದ್ದ ಸಚಿವೆ ಸವಿತಾ ಅವರು ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಕೂಡ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿ ಯೋಧನಿಗೆ ಗೌರವ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್, ಯೋಧನ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದರು.

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಹುತಾತ್ಮ ಯೋಧ ಮುರಳಿ ನಾಯಕ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಐದು ಎಕರೆ ಕೃಷಿ ಭೂಮಿ, ವಸತಿಗಾಗಿ 300 ಚದರಡಿ ಭೂಮಿಯನ್ನು ಘೋಷಿಸಿದ್ದಾರೆ. ಸಂಪುಟದಲ್ಲಿ ಚರ್ಚೆಯ ನಂತರ ನಾಯಕ್ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಹ ನೀಡಲಾಗುವುದು ಎಂದು ಪವನ್‌ ಕಲ್ಯಾಣ್ ತಿಳಿಸಿದರು. ದುಃಖಿತ ಕುಟುಂಬಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ಪರಿಹಾರ ನೀಡಿದರು.