



ಡೈಲಿ ವಾರ್ತೆ: 16/MAY/2025


ಕರ್ನಾಟಕ ಲೋಕಾಯುಕ್ತ ದಾಳಿ: ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!

ಬೆಂಗಳೂರು: ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿದವರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು, ಗುರುವಾರ ರಾಜ್ಯಾದ್ಯಂತ ಭರ್ಜರಿ ಬೇಟೆಯಾಗಿದ್ದಾರೆ.
ಕರ್ನಾಟಕದ 35 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಾನೂನು ಮಾಪನ ನಿರೀಕ್ಷಕರಾಗಿದ್ದವರು ಹಣದಾಸೆಗೆ ಲಂಚಕ್ಕೆ ಕೈಯೊಡ್ಡಿದ್ದು, ಲೋಕಾ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ, ಮನೆಗಳು, ಭೂಮಿ ಮಾಡಿಕೊಂಡಿರುವುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಕಾನೂನು ಮಾಪನ ನಿರೀಕ್ಷ ಹೆಚ್. ಆರ್. ನಟರಾಜ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ. ನಟರಾಜ್ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ದಾಳಿಯಾಗಿದ್ದು, ಈ ವೇಳೆ ಬರೊಬ್ಬರಿ 3,94,50,000 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 2 ನಿವೇಶನ, 2 ವಾಸದ ಮನೆ, 9 ಎಕರೆ ಕೃಷಿ ಜಮೀನು ಸೇರಿ ಸ್ಥಿರಾಸ್ತಿ ಒಟ್ಟು ಮೌಲ್ಯ 3 ಕೋಟಿ 13 ಲಕ್ಷ ರೂಪಾಯಿ ಆಗಿದೆ.
ಯೋಜನಾ ನಿರ್ದೇಶಕನ ಬಳಿ 3 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೋಸಕೋಟೆಯಲ್ಲೂ ದ್ವಿತೀಯ ದರ್ಜೆ ಸಹಾಯಕ ಅನಂತ ಕುಮಾರ್ಗೂ ಲೋಕಾಯುಕ್ತ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಅನಂತ ಕುಮಾರ್ಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಇತ್ತ ತುಮಕೂರು ಜಿಲ್ಲೆ ಯೋಜನೆ ನಿರ್ದೇಶಕ ರಾಜಶೇಖರ ಡಿ ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ದಾಳಿ ನಡೆದಿದ್ದು, ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 3,89,50,000 ರೂ. ಎನ್ನಲಾಗಿದೆ. 12 ನಿವೇಶನ , ನಾಲ್ಕು ವಾಸದ ಮನೆಗಳು, ನಾಲ್ಕು ಎಕರೆ ಕೃಷಿ ಜಮೀನು, ನಗದು 11,66,930 ರೂ. ಪತ್ತೆಯಾಗಿದೆ.