



ಡೈಲಿ ವಾರ್ತೆ: 18/MAY/2025


ರಾಯಚೂರು| ನಡುರಸ್ತೆಯಲ್ಲೇ ಯುವಕನ ಬರ್ಬರ ಕೊಲೆ, ಓರ್ವ ಆರೋಪಿ ವಶಕ್ಕೆ

ರಾಯಚೂರು: ನಗರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ನಗರದ ಡಾ. ಜಾಕೀರ್ ಹುಸೇನ್ ವೃತ್ತದಲ್ಲಿ ಯುವಕನ ಕೊಲೆ ನಡೆದಿದೆ. ಜಹೀರಾಬಾದ್‌ನ ಬಡಾವಣೆಯ ಸಾದಿಕ್ (27) ಹತ್ಯೆಯಾದ ಯುವಕ.
ಘಟನೆ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೋರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರೀಂ ಬಂಧಿತನಾದ ಆರೋಪಿ. ಬೆಳಗ್ಗೆ ನಾಲ್ಕು ಗಂಟೆಗೆ ಇಡ್ಲಿ ತಿನ್ನಲು ಸಾದಿಕ್ ಮನೆಯಿಂದ ಹೊರಗೆ ಬಂದಿದ್ದ. ಈ ವೇಳೆ ದಾಳಿ ಮಾಡಿ ಕೊಲೆಗೈಯ್ಯಲಾಗಿದೆ. ಆರೋಪಿಗಳು ಸಾದಿಕ್ ದೇಹಕ್ಕೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾದಿಕ್ನನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.