ಡೈಲಿ ವಾರ್ತೆ: 21/MAY/2025

ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ: ವೈರಸ್ ಇಂಜೆಕ್ಷನ್ ಚುಚ್ಚಿ, ಮುಖದ ಮೇಲೆ ಮೂತ್ರ ಮಾಡಿದ್ದ ಆರೋಪ

ಬೆಂಗಳೂರು: ಆರ್​ಆರ್​ ನಗರ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತೆ ನೀಡಿದ ದೂರು ಆಧರಿಸಿ ಬೆಂಗಳೂರಿನ ಆರ್​​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಮುನಿರತ್ನ ಹಾಗೂ ಅವರ ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. 2013ರಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದರು. ಶಾಸಕರ ಕಚೇರಿಯಲ್ಲೇ ಅತ್ಯಾಚಾರ ಎಸಗಲಾಗಿತ್ತು. ಅಷ್ಟೇ ಅಲ್ಲದೆ, ವೈರಸ್ ಇಂಜೆಕ್ಷನ್ ಚುಚ್ಚಿದ್ದರು. ಅದರಿಂದಾಗಿ ಇಡಿಆರ್ ಕಾಯಿಲೆ ಬಂದಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕರು ಮತ್ತು ಇತರ ಆರೋಪಿಗಳ ಕೃತ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುನಿರತ್ನ ವಿರುದ್ಧ ಎಫ್​ಐಆರ್​ನಲ್ಲೇನಿದೆ?
ಶಾಸಕ ಮುನಿರತ್ನ ಹಾಗೂ ಇತರ ಆರೋಪಿಗಳ ವಿರುದ್ಧದ ಎಫ್​ಐಆರ್​ನಲ್ಲಿ, ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಸಂಪೂರ್ಣ ವಿಚಾರ ಉಲ್ಲೇಖಿಸಲಾಗಿದೆ. ಶಾಸಕರ ಕಚೇರಿಯಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಅಮಾನುಷವಾಗಿ ನಡೆದುಕೊಂಡ ಬಗ್ಗೆ ಸಂತ್ರಸ್ತೆ ಆರೋಪ ಮಾಡಿದ್ದಾರೆ.
‘‘ನಾನು ಬಿಜೆಪಿ ಮಹಿಳಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಮೊದಲನೆಯ ಪತಿ ರಾಜು 15 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದರಿಂದ 5 ವರ್ಷಗಳ ಹಿಂದೆ ಜಗದೀಶ್ ಎಂಬುವರನ್ನು ಮನೆಯಲ್ಲಿಯೇ ವಿವಾಹ ಮಾಡಿಕೊಂಡು ಸಂಸಾರ ಮಾಡಿಕೊಂಡಿದ್ದೇನೆ. 2013 ರಲ್ಲಿ ನಾನು ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಎ1 ಆರೋಪಿ ಮುನಿರತ್ನ ಅವರು ಪೀಣ್ಯ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ವೇಶ್ಯಾವಾಟಿಕೆ ನಡೆಸುತ್ತಿರುತ್ತಾಳೆಂದು ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರದಲ್ಲಿ ಮುನಿರತ್ನ ತನ್ನ ಬೆಂಬಲಿಗರಾದ ನಂದಿನಿ ಲೇಔಟ್ ವಾಸಿಗಳಾದ ಎ2 ವಸಂತ, ಎ3 ಚನ್ನಕೇಶವ, ಆಶ್ರಯನಗರದ ಎ4 ಕಮಲ್ ಮತ್ತು ಇತರರೊಂದಿಗೆ ಸೇರಿಕೊಂಡು ಆಶ್ರಯನಗರದ ವಾಸಿ ಸುನೀತಬಾಯಿ (ಮೂಗಿ) ಮೂಲಕ ಆರ್​​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆಫ್ ಮರ್ಡರ್ ಪ್ರಕರಣ ಕೇಸ್ ದಾಖಲಿಸಿ ಮತ್ತೆ ತನ್ನನ್ನು ಜೈಲಿಗೆ ಕಳುಹಿಸಿದ್ದರು. ಒಂದು ತಿಂಗಳ ಕಾಲ ಜೈಲಿನಲ್ಲಿದ್ದು ನಂತರ ಜಾಮೀನು ಪಡೆದುಕೊಂಡು ಬಂದಿದ್ದು, 2023 ರ ಜೂನ್ ತಿಂಗಳ 11ನೇ ತಾರೀಖಿನಂದು ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಎ2 ಮತ್ತು ಎ4 ಆರೋಪಿತರು ಮನೆಯ ಬಳಿಗೆ ಬಂದು ಮುನಿರತ್ನ ರವರು ನಿಮ್ಮ ಮೇಲಿರುವ ಕೇಸುಗಳನ್ನು ವಾಪಸ್ ತೆಗೆಸುತ್ತಾರೆಂದು ಹೇಳಿ ಮುನಿರತ್ನಗೆ ಫೋನ್ ಮಾಡಿಕೊಟ್ಟಿದ್ದಾರೆ. ಫೋನಿನಲ್ಲಿ ಮಾತನಾಡಿಸಿ ಯಶವಂತಪುರದ ಜೆಪಿ ಪಾರ್ಕ್ ಬಳಿ ಇರುವ ಕಚೇರಿಗೆ ಬರುವಂತೆ ತಿಳಿಸಿದ್ದರು. ಆಗ ಎ2 ಮತ್ತು ಎ4 ಆರೋಪಿಗಳ ಜೊತೆಯಲ್ಲಿ ಇನೋವಾ ಕಾರಿನಲ್ಲಿ ಮುನಿರತ್ನ ಕಚೇರಿಯ ಬಳಿಗೆ ಹೋಗಿದ್ದೆ’’ ಎಂದು ಸಂತ್ರಸ್ತ ಮಹಿಳೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶಾಸಕರ ಕಚೇರಿಯಲ್ಲೇ ಬೆತ್ತಲಾಗಿಸಿ ಮುಖದ ಮೇಲೆ ಮೂತ್ರ ಮಾಡಿದರು:
ಮಹಿಳೆ ಆರೋಪ ಶಾಸಕರ ಕಚೇರಿಯಲ್ಲಿ ಆರೋಪಿಗಳು ರೂಮಿನಲ್ಲಿರುವ ದಿವಾನ್ ಮೇಲೆ ಕುಳಿತುಕೊಳ್ಳಲು ಹೇಳಿದಾಗ ನಾನು ಒಪ್ಪದಿದ್ದಾಗ ಕೆನ್ನೆಗೆ ಹೊಡೆದಿದ್ದದರು. ಬಳಿಕ ನಾನು ದಿವಾನ್ ಕಾಟ್ ಮೇಲೆ ಕುಳಿತು ಕೊಂಡಾಗ ಎ1, ಎ2 ಮತ್ತು ಎ3 ಆರೋಪಿತರುಗಳು ಬಲವಂತವಾಗಿ ಬೆತ್ತಲೆಗೊಳಿಸಿ, ದಿವಾನ್ ಕಾಟ್ ಮೇಲೆ ಮಲಗಿಸಿ, ಎಷ್ಟು ಬೇಡಿಕೊಂಡರು ಕೇಳದೇ ಬೆದರಿಕೆ ಹಾಕಿದ್ದಾರೆ. ಸಹಕರಿಸದೇ ಇದ್ದರೆ ನಿನ್ನ ಮಗನನ್ನು ಈಗಲೇ ಹೊಡೆದು ಹಾಕಿಸುತ್ತೇವೆಂದು ಹೇಳಿ ಬೆದರಿಸಿ, ಎ1 ಆರೋಪಿತನು ಎ2 ಆರೋಪಿತನಿಂದ ನನ್ನ ಮೇಲೆ ಬಲವಂತದಿಂದ ಅತ್ಯಾಚಾರ ಮಾಡಿಸಿದ್ದಾರೆ. ನಂತರ ಎ3 ಆರೋಪಿತನಿಂದಲೂ ಅತ್ಯಾಚಾರ ಮಾಡಿಸಿದ್ದಾರೆ. ಎ1 ಆರೋಪಿತನು ಫೋನ್ ಮಾಡಿ ಅಪರಿಚಿತ ಎ5 ಆರೋಪಿಯಾದ 40 ವರ್ಷ ವಯಸ್ಸಿನ ಗಂಡಸನ್ನು ಕರೆಸಿಕೊಂಡು ಆತನು ತಂದಿದ್ದ ಬಿಳಿಬಣ್ಣದ ಬಾಕ್ಸ್ ಪಡೆದುಕೊಂಡಿದ್ದಾನೆ. ನಂತರ ಎ1 ಆರೋಪಿಯು ಪ್ಯಾಂಟ್ ಜಿಪ್ ಬಿಚ್ಚಿ ಬಾಯಿಗೆ ಮೂತ್ರ ವಿಸರ್ಜನೆ ಮಾಡಲು ಯತ್ನಿಸಿದಾಗ ಬಾಯಿ ಮುಚ್ಚಿಕೊಂಡಿದ್ದರಿಂದ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಎ1 ಆರೋಪಿತನು ಎ2 ಮತ್ತು ಎ3 ಆರೋಪಿತರುಗಳಿಗೆ ನನ್ನ ಕೈಗಳನ್ನು ಹಿಡಿದುಕೊಳ್ಳುವಂತೆ ತಿಳಿಸಿ, ಬಿಳಿ ಬಣ್ಣದ ಬಾಕ್ಸ್ ನಲ್ಲಿದ್ದ ಇಂಜೆಕ್ಷನ್ ಅನ್ನು ತಂದು ಎಡ ಕೈ ರೆಟ್ಟಿಗೆ ಚುಚ್ಚಿದ್ದಾನೆ. ನೀನು ಜೀವನಪರ್ಯಂತ ನರಳುತ್ತೀಯಾ ಎಂದು ಹೇಳಿ, ಈ ವಿಚಾರವನ್ನು ಪೊಲೀಸರ ಬಳಿ ಅಥವಾ ಬೇರೆಯವರ ಬಳಿ ಹೇಳಿಕೊಂಡರೆ ನಿಮ್ಮ ಕುಟುಂಬವನ್ನು ಮುಗಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ. ನಂತರ ಎ2 ಮತ್ತು ಎ4 ಆರೋಪಿಗಳಿಗೆ, ಇವಳನ್ನು ಎಲಿಂದ ಕರೆದುಕೊಂಡು ಬಂದಿರೋ ಅಲಿಗೆ ಹೋಗಿ ಬಿಸಾಡಿ ಬನ್ನಿ ಎಂದು ಹೇಳಿದ್ದಾನೆ. ನಂತರ ಎ2 ಮತ್ತು ಎ4 ಆರೋಪಿಗಳೊಂದಿಗೆ ನನ್ನನ್ನು ಇನ್ನೊವ ಕಾರಿನಲ್ಲಿ ಕಳುಹಿಸಿ ಆಶ್ರಯನಗರಕ್ಕೆ ಬಿಟ್ಟಿದ್ದು, ಆಗ ಎ2 ಆರೋಪಿತನು ಹಿಂದಿರುಗಿ ನೋಡದೆ ಹೋಗುವಂತೆ ಬೆದರಿಸಿರುತ್ತಾನೆ’’ ಎಂದೂ ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.