



ಡೈಲಿ ವಾರ್ತೆ: 23/MAY/2025


ಬಿಡದಿ ದಿವ್ಯಾಂಗ ಬಾಲಕಿ ಸಾವಿಗೆ ಕಾರಣವೇನು? ಮತ್ತಷ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ರಾಮನಗರ: ಬಿಡದಿ ಹೋಬಳಿಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವಾರದ ಹಿಂದೆ ಶವವಾಗಿ ಪತ್ತೆಯಾಗಿದ್ದ ದಿವ್ಯಾಂಗ ಬಾಲಕಿ ಖುಷಿ(15) ಮೇಲೆ ಅತ್ಯಾಚಾರ ಎಸಗಿ ಬಳಿಕ ಭೀಕರವಾಗಿ ಕೊಲೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಆದ್ರೆ, ಬಾಲಕಿ ಮೇಲೆ ಅತ್ಯಾಚಾರವಾಗಿಲ್ಲ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯ ದಿವ್ಯಾಂಗ ಬಾಲಕಿ ಸಾವು ಪ್ರಕರಣ ಸಂಬಂಧ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಇಂದು (ಮೇ 19) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಾಲಕಿ ಸಾವಿನ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗಿದೆ. ಹೆಡ್ ಇಂಜೂರಿಯಿಂದ ಮೃತಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖವಾಗದೆ. ಎಫ್‌ಎಸ್‌ಎಲ್, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೈಲ್ವೆ ಇಲಾಖೆಯ ಸಿಸಿ ಕ್ಯಾಮರಾದ ವಿಡಿಯೋ ಪಡೆದುಕೊಂಡಿದ್ದೇವೆ. ಎರಡು ಸಿಸಿ ಕ್ಯಾಮರಾದಲ್ಲಿ ಬಾಲಕಿಯ ಚಲನವಲನ ಕಂಡು ಬಂದಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿದಾಗ ರೈಲ್ವೆ ಅಪಘಾತ ಎಂಬುದು ಕಂಡುಬಂದಿದೆ. 6 ಗಂಟೆ 7 ನಿಮಿಷದಿಂದ 6 ಗಂಟೆ 8 ನಿಮಿಷದ ಮಧ್ಯೆ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದರು.
ರೈಲ್ವೆ ಇಲಾಖೆಯ ಸಿಸಿ ಕ್ಯಾಮರಾದ ಕಂಪ್ಲೀಟ್ ಬ್ಯಾಕಪ್ ಸಹ ಪಡೆದಿದ್ದೇವೆ. ರೈಲಿನಲ್ಲೂ ಪರಿಶೀಲನೆ ಮಾಡಿ ಸ್ಯಾಂಪಲ್ಸ್ ಸಂಗ್ರಹಿಸಿದ್ದೇವೆ, FSLಗೆ ಕಳಿಸುತ್ತೇವೆ. ವರದಿ ಬರುವ ಮುನ್ನ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಹರಡಿದ್ರು. ಇದೆಲ್ಲವೂ ಸುಳ್ಳು, ಇನ್ನಷ್ಟು ಅನುಮಾನಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ದಿವ್ಯಾಂಗ ಬಾಲಕಿಯ ಸಾವಿನ ಬಗ್ಗೆ ಇನ್ನೂ ತನಿಖೆ ಮುಂದುವರಿಸಿದ್ದೇವೆ ಎಂದು ರಾಮನಗರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.