ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಹೊನ್ನಾವರ ಕವಲಕ್ಕಿಯಲ್ಲಿ ಯಕ್ಷಗಾನ ವಿಚಾರ ಸಂಕಿರಣ, ಯಕ್ಷಗಾನ ಪ್ರದರ್ಶನ: ಯಕ್ಷಗಾನವನ್ನು ಮನೆಮನಕ್ಕೆ ತಲುಪಿಸಲು ಯಕ್ಷಗಾನ ಅಕಾಡೆಮಿ ಪ್ರಯತ್ನ : ಡಾ.ತಲ್ಲೂರು

ಉಡುಪಿ : ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಪುನರ್ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಇಂದು ಸಮಷ್ಠಿಯನ್ನು ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಇಲ್ಲಿ ವೃತ್ತಪರ ಕಲಾವಿದರದಲ್ಲದೆ, ಹವ್ಯಾಸಿಯಾಗಿ ವೈದ್ಯರು, ಇಂಜೀನಿಯರ್‌ಗಳು, ಸಾಹಿತಿಗಳು, ಅಧ್ಯಾಪಕರು ಹೀಗೆ ಎಲ್ಲಾ ಕ್ಷೇತ್ರದ ವ್ಯಕ್ತಿಗಳು ತಮ್ಮನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಇದು ಯಕ್ಷಗಾನ ಕಲೆಯ ವೈಶಿಷ್ಟ್ಯ ಇದನ್ನು ಅನ್ಯ ಕಲೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ತೆಂಕುತಿಟ್ಟು, ಬಡಗುತಿಟ್ಟು, ಉತ್ತರ ಕನ್ನಡದ ಕಡೆ ಬಡಾಬಡಗುತಿಟ್ಟು ಹೀಗೆ ವಿವಿಧ ಪ್ರಕಾರಗಳಲ್ಲಿ ಯಕ್ಷಗಾನ ಜನಮಾನಸದಲ್ಲಿ ನೆಲೆಸಿದೆ. ಉತ್ತರ ಕನ್ನಡ ಜಿಲ್ಲೆಯಂತೂ ಅಗಣಿತ ಮೇರು ಯಕ್ಷಗಾನ ಕಲಾವಿದರನ್ನು ನಾಡಿಗೆ ನೀಡಿದೆ. ಚಿಟ್ಟಾಣಿಯಂತಹ ದಿಗ್ಗಜರಿಂದ ಪದ್ಮಶ್ರೀ ಗೌರವ ಕೂಡಾ ಸಂದಿರುವುದನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಯಕ್ಷಗಾನ ಕಲೆ ಮನೆ, ಮನವನ್ನು ಮುಟ್ಟಲು ಮಕ್ಕಳಿಗೆ ಯಕ್ಷಗಾನ ಕಲಿಸಬೇಕು. ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಅಧಿಕ ಮಂದಿ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಇದು ರಾಜ್ಯದ ಅನ್ಯ ಜಿಲ್ಲೆಗಳಿಗೂ ಮುಟ್ಟಬೇಕು ಎಂಬುದೇ ಅಕಾಡೆಮಿ ಅಧ್ಯಕ್ಷನಾಗಿ ನನ್ನ ಬಯಕೆ. ಯಕ್ಷಗಾನವನ್ನು ಕಲಿತ ಮಕ್ಕಳು ಸಂಸ್ಕಾರ ಹೀನಲಾಗಲಾರರು. ವೃದ್ಧಾಪ್ಯದಲ್ಲಿ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಮೇಯ ತರಲಾರರು. ಯಾಕೆಂದರೆ ಯಕ್ಷಗಾನದಲ್ಲಿ ಗುರುಹಿರಿಯರನ್ನು ತಂದೆತಾಯಿಯನ್ನು ಗೌರವಿಸುವ ನೈತಿಕ ಶಿಕ್ಷಣದ ಪಾಠ ಲಭಿಸುತ್ತದೆ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಗೂ ಕಾರಣವಾಗಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಸಲು ಯಾವುದೇ ಹಿಂಜರಿಕೆ ಬೇಡ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಯಕ್ಷಗಾನ ಅಕಾಡೆಮಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿoದ ಹಿಡಿದು ಇಲಾಖಾ ಸಚಿವರು ಕೂಡಾ ಪ್ರೋತ್ಸಾಹ ನೀಡುತ್ತಿದ್ದಾರೆ. ಸರಕಾರ ನೀಡಿದ ಅನುದಾನವನ್ನು ಯಕ್ಷಗಾನದ ಬೆಳವಣಿಗೆಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ವಿನಿಯೋಗವಾಗಬೇಕು ಎಂಬುದೇ ನನ್ನ ಆಶಯ. ಈ ನಿಟ್ಟಿನಲ್ಲಿ ಅಕಾಡೆಮಿಯ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಳ್ಳುತ್ತಿರುವ ಯಕ್ಷಗಾನ ವಿಚಾರ ಸಂಕಿರಣಗಳು, ಪ್ರದರ್ಶನಗಳು, ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದೆ. ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಯಕ್ಷಗಾನ ಅಭಿಮಾನಿಗಳು ಇದನ್ನು ಸ್ವಾಗತಿಸಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಮಾತನಾಡಿ, ಯಕ್ಷಗಾನ ಕಲಾವಿದರಿಗಾಗಿ ಕಳೆದ 20ಕ್ಕೂ ಅಧಿಕ ವರ್ಷಗಳಿಂದ ತನುಮನಧನದಿಂದ ಪ್ರೋತ್ಸಾಹಿಸುತ್ತಿರುವ ಡಾ.ತಲ್ಲೂರು ಅವರು ಅಕಾಡೆಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ಯಕ್ಷಗಾನ ಒಂದು ಆರಾಧನಾ ಕಲೆ. ಜನರಿಗೆ ಸಂತೋಷ ಕೊಡುವುದು ಎಂದರೆ ಈಶ್ವರನಿಗೆ ಆರಾಧನೆ ಮಾಡಿದ ಹಾಗೆ. ಯಕ್ಷಗಾನ ಹಾದಿ ತಪ್ಪುತ್ತಿದೆ ಎಂಬ ಅಪವಾದ ಕೇಳಿ ಬರುತ್ತಿದೆ. ಯಕ್ಷಗಾನಕ್ಕೆ ಯಾವುದೇ ಕೊಡುಗೆ ಬೇಕಾಗಿಲ್ಲ. ಪ್ರಾಚೀನ ದಿನಗಳಿಂದ ಇಂದಿನವರೆಗೆ ಯಕ್ಷಗಾನ ಕಲೆ ಅನೇಕ ಸುಧಾರಣೆಗಳನ್ನು ಕಂಡಿದೆ. ಹಾಗಾಗಿ ಇದು ಅಳಿಯುವ ಕಲೆ ಅಲ್ಲ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ, ತನ್ನ ಅಧ್ಯಕ್ಷತನದ ಅವಧಿಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಯಕ್ಷಗಾನ ಕಾರ್ಯಕ್ರಮಗಳು ನಡೆಯಬೇಕು ಎಂದು ಹಂಬಲ ಹೊಂದಿರುವ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಕಾಡೆಮಿಗೆ ಅಧ್ಯಕ್ಷರಾಗಿ ಸಿಕ್ಕಿರುವುದು ಕಲೆಯ ಪುಣ್ಯ. ಉತ್ತರ ಕನ್ನಡದ ಯಕ್ಷಗಾನ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತರಿಗೆ ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಲಭಿಸದಿರುವುದು ಬೇಸರದ ಸಂಗತಿ ಎಂದರು.

ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯa ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ, ಕಡತೋಕ ಗೋಪಾಲಕೃಷ್ಣ ಭಾಗವತ, ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಸಂದರ್ಭೋಚಿತ ಮಾತುಗಳನ್ನಾಡಿದರು.

ಉದ್ಯಮಿ ವೆಂಕಟರಮಣ ಹೆಗ್ಡೆ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ್ ಹೆಗ್ಡೆ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ, ತಾಳ ಮದ್ದಲೆ, ಯಕ್ಷಗಾನ ವಿಚಾರಗೋಷ್ಠಿಗಳು ನಡೆದವು.