ಡೈಲಿ ವಾರ್ತೆ: 27/MAY/2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲವಾರು ಝಳಪಿಸಿದ ದುಷ್ಕರ್ಮಿಗಳು – ಭೀಕರ ತಲವಾರು ದಾಳಿಗೆ ಓರ್ವ ಮೃತ್ಯು ಇನ್ನೋರ್ವ ಗಂಭೀರ ಗಾಯ!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲವಾರು ಝಳಪಿಸಿದೆ. ಸುಹಾಸ್ ಶೆಟ್ಟಿ ಹತ್ಯೆಯಿಂದ ಪ್ರಕ್ಷುಬ್ದಗೊಂಡಿದ್ದ ಜಿಲ್ಲೆ ಒಂದಷ್ಟು ಸಹಜ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲಿ ಇದೀಗ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಭೀಕರ ತಲವಾರು ದಾಳಿ ನಡೆದಿದ್ದು, ಓರ್ವ ದಾರುಣವಾಗಿ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮೃತ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಸಮೀಪದ ಬೆಳ್ಳೂರು ನಿವಾಸಿ ಅಬ್ದುಲ್ ಖಾದರ್ ಯಾನೆ ಖಾದ್ರಿಯಾಕ ಅವರ ಪುತ್ರ, ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಯಾನೆ ರಹೀಂ ಎಂದು ಹೆಸರಿಸಲಾಗಿದ್ದು, ಗಾಯಾಳುವನ್ನು ಆತನ ಜೊತೆಗಿದ್ದ ಶಾಫಿ ಯಾನೆ ಖಲಂದರ್ ಶಾಫಿ ಎಂದು ಹೆಸರಿಸಲಾಗಿದೆ.

ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಹಾಡಹಗಲೇ ಈ ತಲವಾರು ದಾಳಿ ನಡೆದಿದೆ. ಇಲ್ಲಿನ ಮನೆಯೊಂದರ ಮುಂದೆ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳು ರಹೀಮ್‍ನನ್ನು ಭೀಕರವಾಗಿ ಕಡಿದು ಹಾಕಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಜೊತೆಗಿದ್ದ ಶಾಫಿ ಯಾನೆ ಖಲಂದರ್ ಶಾಫಿ ಎಂಬಾತನ ಮೇಲೂ ದಾಳಿ ಮಾಡಲಾಗಿದ್ದು, ಆತನಿಗೂ ಗಂಭೀರ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು ಶಾಫಿ ಅವರ ಹೇಳಿಕೆ ಪಡೆಯುತ್ತಿರುವ ಬಂಟ್ವಾಳ ಪೊಲೀಸರು ಅವರ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಘಟನೆಗೆ ಕಾರಣ ಏನು..? ಕೃತ್ಯ ನಡೆಸಿದವರು ಯಾರು ಎಂಬುದು ಪೊಲೀಸ್ ತನಿಖೆಯ ಬಳಿಕ ಗೊತ್ತಾಗಲಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಹೀಂ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ರಹೀಂ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅಪ್ರಾಪ್ತ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಇವರು ಕೊಳ್ಳತ್ತಮಜಲು ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸ್ಥಳೀಯವಾಗಿ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಸೀದಾ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಎಸ್ಪಿ ಅವರ ವರದಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕಿಗೆ ಸಂಬಂಧಪಟ್ಟಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಪೊಲೀಸರು ಬಂದೊಬಸ್ತ್ ಬಿಗುಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಘಟನೆಯ ಹೆಚ್ಚಿನ ವಿವರ ಪೊಲೀಸ್ ತನಿಖೆಯ ಬಳಿಕ ಗೊತ್ತಾಗಲಿದೆ.

ಪ್ರಕರಣದ ಕುರಿತು ದ.ಕ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾತನಾಡಿ, ಮಧ್ಯಾಹ್ನ 3:30ರ ವೇಳೆಗೆ ಘಟನೆಯಾಗಿದೆ. ಮರಳು ಸಾಗಾಟಕ್ಕೆಂದು ಹೋದಾಗ ಕೃತ್ಯ ನಡೆದಿದೆ. ರಹೀಂ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಮೃತರಾಗಿರೋದು ಗೊತ್ತಾಗಿದೆ. ಇನ್ನೊಬ್ಬನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆಯ ಕಾರಣ ಮತ್ತು ಆರೋಪಿಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಶಂಕಿತರನ್ನು ಕರೆದು ವಿಚಾರಣೆಯನ್ನು ಮಾಡುತ್ತಿದ್ದೇವೆ. ತನಿಖೆ ನಡೆಯುತ್ತಿರೋದರಿಂದ ಬೇರೆ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.