ಡೈಲಿ ವಾರ್ತೆ: 15/JUNE/2025

ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್​ ಪತನ – ಪೈಲಟರ್​ ಸೇರಿ 6 ಮಂದಿ ದುರ್ಮರಣ

ಕೇದಾರನಾಥ: ಅಹಮದಾಬಾದ್​​ನಲ್ಲಿ ಸಂಭವಿಸಿದ ವಿಮಾನ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.
ಗೌರಿಕುಂಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್​​ನಲ್ಲಿ ಪೈಲಟರ್​ ಸೇರಿ 6 ಮಂದಿ ಇದ್ದರು ಎಂದು ಹೇಳಲಾಗುತ್ತಿದ್ದು, ಎಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೆಟ್ಟ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ. ಘಟನೆಯ ನಂತರ, ಎನ್​​ಡಿಆರ್​ಎಫ್​ ತಂಡಗಳು ಸ್ಥಳಕ್ಕೆ ತಲುಪಿವೆ. ಆದಾಗ್ಯೂ, ಕೆಟ್ಟ ಹವಾಮಾನದಿಂದಾಗಿ, ರಕ್ಷಣಾ ಕಾರ್ಯವು ತೊಂದರೆಗಳನ್ನು ಎದುರಿಸುತ್ತಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ. ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಹೊಗೆಯನ್ನು ನೋಡಿದ ನಂತರ ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ 6 ಜನರಿದ್ದರು ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಆರ್ಯನ್ ಏವಿಯೇಷನ್‌ನದು ಎಂದು ಹೇಳಲಾಗುತ್ತಿದೆ. ಈ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಹೋಗುತ್ತಿದ್ದಾಗ ತ್ರಿಜುಗಿನಾರಾಯಣ ಮತ್ತು ಗೌರಿಕುಂಡ್ ನಡುವೆ ನಾಪತ್ತೆಯಾಗಿದೆ.

ಕಳೆದ ಒಂದು ತಿಂಗಳಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಮೂರನೇ ಹೆಲಿಕಾಪ್ಟರ್ ಅಪಘಾತ ಇದಾಗಿದೆ.
ಮೃತಪಟ್ಟವರಲ್ಲಿ 23 ತಿಂಗಳ ಮಗು ಕೂಡ ಇತ್ತು ಎಂದು ತಿಳಿದುಬಂದಿದೆ. ಬೆಳಿಗ್ಗೆ 5.30 ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಟ್ಟ ಹವಾಮಾನವೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.