


ಡೈಲಿವಾರ್ತೆ: 25/ನ./2026




ಉಡುಪಿ: ಕುಂಜಾರುಗಿರಿ ದೀಪೋತ್ಸವಕ್ಕೆ ಬಂದಿದ್ದ ವೃದ್ಧನ ಮೇಲೆ ಸುತ್ತಿಗೆಯಿಂದ ದಾಳಿ: ₹4.50 ಲಕ್ಷದ ಚಿನ್ನದ ಸರ ದರೋಡೆ, ಆರೋಪಿ ಬಂಧನ!

ಉಡುಪಿ: ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ 68 ವರ್ಷದ ವ್ಯಕ್ತಿಯನ್ನು ಹಣಕಾಸಿನ ನೆರವು ಕೇಳುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು, ಸುತ್ತಿಗೆಯಿಂದ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಸುಮಾರು ₹4.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ನ.24ರಂದು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಬಿ. ರಾಜಮೂರ್ತಿ ಭಟ್ (68) ಅವರು ತೆರಳಿದ್ದರು. ಈ ಸಂದರ್ಭದಲ್ಲಿ ಅವರಿಗೆ ಪರಿಚಯವಿದ್ದ ಮುರಳಿಕೃಷ್ಣ ಎಂಬಾತ ರಾತ್ರಿ ಸುಮಾರು 8.30ರ ವೇಳೆಗೆ ಅವರನ್ನು ಭೇಟಿಯಾಗಿ, ಮಾತನಾಡುವುದಿದೆ ಎಂದು ಹೇಳಿ ದೇವಸ್ಥಾನದ ಆವರಣದಿಂದ ಹೊರಗೆ ಕರೆದೊಯ್ದಿದ್ದಾನೆ.
ಬಳಿಕ ತನ್ನ ಕಾರಿನಲ್ಲಿ ಅವರನ್ನು ಕೂರಿಸಿಕೊಂಡ ಆರೋಪಿ, ತಾನು ಸುಮಾರು 60 ಎಕರೆ ಜಮೀನಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ. ಇದಕ್ಕಾಗಿ ₹25 ಲಕ್ಷದ ಅಗತ್ಯವಿದ್ದು, ಹಣಕಾಸಿನ ನೆರವು ನೀಡುವಂತೆ ರಾಜಮೂರ್ತಿ ಭಟ್ ಅವರಲ್ಲಿ ಕೇಳಿಕೊಂಡಿದ್ದಾನೆ. ಆದರೆ, ಅವರು ಹಣ ನೀಡಲು ನಿರಾಕರಿಸಿದಾಗ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಕಾರಿನೊಳಗೇ ಸುತ್ತಿಗೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಯಿಂದ ತಪ್ಪಿಸಿಕೊಳ್ಳಲು ರಾಜಮೂರ್ತಿ ಭಟ್ ಅವರು ಯತ್ನಿಸಿದರೂ ಬೆನ್ನಟ್ಟಿ ಬಂದ ಆರೋಪಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳನ್ನು ಹೊಂದಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾನೆ.
ದರೋಡೆಯಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ₹4.50 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 311, 309(6) ಹಾಗೂ 118(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಶಿರ್ವ ಪೊಲೀಸರು, ಕಾಪು ತಾಲೂಕಿನ ಪಡುಬೆಳ್ಳೆ ಗ್ರಾಮದ ಮುರಳಿಕೃಷ್ಣ ಉಪಾಧ್ಯಾಯ (47) ಎಂಬಾತನನ್ನು ನ.25ರಂದು ಬಂಧಿಸಿದ್ದಾರೆ.
ಆರೋಪಿಯಿಂದ ಅಂದಾಜು ₹1.90 ಲಕ್ಷ ಮೌಲ್ಯದ ತುಳಸಿ ಮಣಿಗಳನ್ನು ಹೊಂದಿರುವ ತುಂಡಾದ ಚಿನ್ನದ ಸರ, ₹2.60 ಲಕ್ಷ ಮೌಲ್ಯದ ತುಂಡಾದ ಹವಳದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

