



ಡೈಲಿ ವಾರ್ತೆ: 01/ಜುಲೈ/2025


ತೆಲಂಗಾಣ| ಔಷಧ ಕಾರ್ಖಾನೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 35ಕ್ಕೆ ಏರಿಕೆ!

ಸಂಗಾರೆಡ್ಡಿ (ತೆಲಂಗಾಣ): ಇಲ್ಲಿನ ಪಾಶಾಮಿಲಾರಾಮ್ ಗ್ರಾಮದ ಕೈಗಾರಿಕಾ ಎಸ್ಟೇಟ್ನಲ್ಲಿರುವ ಫಾರ್ಮಾ ಕಂಪನಿ ಘಟಕದಲ್ಲಿ ಸಂಭವಿಸಿದ ಭೀಕರ ರಿಯಾಕ್ಟರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಮೃತದೇಹಗಳು ಅವಶೇಷಗಳ ಅಡಿ ಸಿಲುಕಿದೆ. ಅವಶೇಷಗಳನ್ನು ತೆರೆಯುವಾಗ ಸುಮಾರು 31 ಶವಗಳು ಪತ್ತೆಯಾಗಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವೇಳೆ ಸಾವನ್ನಪ್ಪಿದ್ದಾರೆ. ಅಂತಿಮ ಹಂತದ ರಕ್ಷಣಾ ಕಾರ್ಯ ಸಾಗಿದೆ ಎಂದು ಜಿಲ್ಲಾ ಎಸ್ಪಿ ಪರಿತೋಷ್ ಪಂಜಕ್ ತಿಳಿಸಿದ್ದಾರೆ.

ತೆಲಂಗಾಣ ಕಾರ್ಖಾನೆ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಇಂದು ಬೆಳಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ರಾಸಾಯನಿಕ ಪ್ರತಿಕ್ರಿಯೆಯಿಂದಾಗಿ ಸೋಮವರ ಬೆಳಗ್ಗೆ 8.15ರಿಂದ 9.35ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯಲ್ಲಿ ಒಟ್ಟು 150 ಜನರು ಕಾರ್ಯ ನಿರ್ವಹಿಸುತ್ತಿದ್ದು, ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಬೆಳಗ್ಗೆ 90 ಮಂದಿ ಕೆಲಸ ಮಾಡುತ್ತಿದ್ದರು ಎಂದು ಐಜಿಪಿ ವಿ ಸತ್ಯನಾರಾಯಣ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಕೂಡಲೇ ಕಾರ್ಖಾನೆಯ ಆಡಳಿತ ಮಂಡಳಿಯವರು ಪೊಲೀಸರು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ 10 ಅಗ್ನಿಶಾಮಕ ದಳದ ವಾಹನ ಹಾಗೂ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಖಾನೆಯಲ್ಲಿನ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ಪರಿಹಾರವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಘೋಷಣೆ ಮಾಡಲಾಗಿದೆ.