



ಡೈಲಿ ವಾರ್ತೆ: 07/ಜುಲೈ/2025


ಅಮೃತೋತ್ಸವ ಸಡಗರದಲ್ಲಿರುವ ಶ್ರೀ ಕೋದಂಡ ರಾಮ ಮಂದಿರದಲ್ಲೀಗ ಯತಿ ಚಾತುರ್ಮಾಸ್ಯಾಚರಣೆಯ ಸಂಭ್ರಮ

ಕುಂದಾಪುರ:
ಸಂಸ್ಥಾಪನೆಯ 75 ನೇ ವರ್ಷದ ಅಮೃತ ಮಹೋತ್ಸವಾಚರಣೆಯ ಸಡಗರದಲ್ಲಿರುವ ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರ ಇದೀಗ ಇನ್ನೊಂದು ಪ್ರಮುಖ ಉತ್ಸವಕ್ಕಾಗಿ ಸಜ್ಜಾಗಿದೆ. ಅದೇ ಯತಿಗಳ ಚಾತುರ್ಮಾಸ್ಯ ವ್ರತ. ಪ್ರತಿಷ್ಠಿತ ಕೋಟೇಶ್ವರ ಮಾಗಣೆಯವರ ಮುಖ್ಯ ಶ್ರದ್ಧಾ ಕೇಂದ್ರಗಳಲ್ಲೊಂದಾದ ಶ್ರೀ ಕೋದಂಡ ರಾಮ ಮಂದಿರದಲ್ಲಿ ಅಮೃತೋತ್ಸವದಂಗವಾಗಿ ಕಳೆದ ಶ್ರೀ ರಾಮ ನವಮಿಯ ಸಂದರ್ಭದಲ್ಲಿ ಬ್ರಹ್ಮ ಕಲಶಾಭಿಷೇಕ ಮತ್ತು ಅಖಂಡ ಭಜನಾ ಸಪ್ತಾಹದ ಮೂಲಕ ಶ್ರೀ ರಾಮೋತ್ಸವವನ್ನು ಶ್ರದ್ಧಾ ಭಕ್ತಿ, ಹಾಗೆಯೇ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮಾಗಣೆಯ ಬಂಧುಗಳು, ದಾನಿಗಳು ಹಾಗೂ ಶ್ರೀ ರಾಮನ ಭಕ್ತರು ಸೇರಿ ಇದನ್ನೆಲ್ಲಾ ಒಂದು ಆವಿಸ್ಮರಣೀಯ ಉತ್ಸವವಾಗಿಸಿದ್ದರು. ಇದೇ ಶುಭ ಸಂದರ್ಭದಲ್ಲಿ ಭಕ್ತರೋರ್ವರು ಸುಮಾರು ಮೂರು ಲಕ್ಷ ರೂ. ಮೌಲ್ಯದ ಸುಂದರ ಕಾಷ್ಠ ನಿರ್ಮಿತ ಶ್ರೀ ರಾಮ ರಥವನ್ನೂ ದೇವರಿಗೆ ಅರ್ಪಿಸಿದ್ದರು.
ಇದೀಗ ಅಮೃತೋತ್ಸವದ ಮುಂದುವರಿದ ಭಾಗವಾಗಿ ಮಂದಿರದ ಇತಿಹಾಸದಲ್ಲೇ ಮೊದಲ ಬಾರಿಗೆ ಯತಿಗಳ ಚಾತುರ್ಮಾಸ್ಯ ವೃತ ಇಲ್ಲೇ ನಡೆಯುತ್ತಿರುವದೊಂದು ವಿಶೇಷ. ತೀರ್ಥಹಳ್ಳಿಯ ಭೀಮನಕಟ್ಟೆಯಲ್ಲಿ ಮೂಲ ಮಠವನ್ನು ಹೊಂದಿದ, ಶ್ರೀಮದ್ ಅಚ್ಯುತ ಪ್ರೇಕ್ಷಾಚಾರ್ಯರ ಮಹಾ ಸಂಸ್ಥಾನ, ಭೀಮಸೇತು ಮುನಿವೃಂದ ಮಠ ಅಥವಾ ಭೀಮನಕಟ್ಟೆ ಮಠ ಎಂದೇ ಖ್ಯಾತಿವೆತ್ತ, ವಿಶ್ವದಾದ್ಯಂತ ಶಿಷ್ಯವೃಂದವನ್ನು ಹೊಂದಿರುವ ಮಠದ ಪೀಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಈ ಬಾರಿ ತಮ್ಮ 17 ನೇ ಚಾತುರ್ಮಾಸ್ಯ ವೃತಾಚರಣೆಗಾಗಿ ಶ್ರೀ ಕೋದಂಡ ರಾಮ ಮಂದಿರಕ್ಕೆ ಚಿತ್ತೈಸುತ್ತಿರುವುದು ಈ ಭಾಗದ ಶಿಷ್ಯವೃಂದದವರ ಭಾಗ್ಯ ಎಂದೇ ಪರಿಗಣಿಸಲಾಗಿದೆ.
ಕೋಟೇಶ್ವರ ಮಾಗಣೆ ಮೂಲದ ಪ್ರಪ್ರಥಮ ಮಾಧ್ವ ಯತಿಗಳಾಗಿರುವ ಶ್ರೀ ರಘುವರೇಂದ್ರ ತೀರ್ಥರ ಹುಟ್ಟೂರು ಇದೇ ವ್ಯಾಪ್ತಿಯ ಬೀಜಾಡಿ ಗ್ರಾಮ. ತಮ್ಮ ಪೂರ್ವಾಶ್ರಮದ ವಿದ್ಯಾಭ್ಯಾಸವನ್ನು ಇದೇ ಬೀಜಾಡಿ, ಕೋಟೇಶ್ವರ ಶಾಲೆಗಳಲ್ಲಿ ಇವರು ಪೂರೈಸಿದ್ದರು. ಇದೀಗ ಪ್ರತಿಷ್ಠಿತ ಮಠದ ಪೀಠಾಧೀಶರಾಗಿ, ಆಧ್ಯಾತ್ಮ ಜ್ಞಾನಿಗಳಾಗಿ ಹುಟ್ಟೂರ ದೇವಾಲಯದಲ್ಲಿ ವೃತಾಚರಣೆ ಕೈಗೊಂಡಿರುವುದು ಮಾಗಣೆಯ ಶಿಷ್ಯ ವೃಂದದಲ್ಲಿ ಸಂಚಲನವನ್ನೇ ಸೃಷ್ಠಿಸಿದೆ.
ಇದೇ ಜುಲೈ 10 ರ ಗುರುವಾರದಿಂದ ಸಪ್ಟಂಬರ್ 7ರ ಭಾನುವಾರದವರೆಗೆ ಈ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದೆ.
ಹಿಂದೂ ಸನಾತನ ಧರ್ಮದ ಯತಿ ಪರಂಪರೆಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಗೆ ಬಹು ಮಹತ್ವವಿದೆ. ಆಷಾಢ ಮಾಸದ ಪ್ರಥಮನ ಏಕಾದಶಿ ಅಥವಾ ಶಯನೀ ಏಕಾದಶಿ ಎಂದು ಕರೆಯಲ್ಪಡುವ ಏಕಾದಶಿಯಿಂದ ಮುಂದಿನ ನಾಲ್ಕು ತಿಂಗಳು ಈ ವೃತಾಚರಣೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಮೊದಲೆಲ್ಲ ಭಾರೀ ಮಳೆ, ಥಂಡಿ, ಪ್ರತಿಕೂಲ ಹವಾಮಾನ ಇರುತ್ತಿದ್ದುದರಿಂದ ಯತಿಗಳ ಧರ್ಮ ಪ್ರಸಾರದ ಕಾಲ್ನಡಿಗೆ ಸಂಚಾರಗಳಿಗೆ ತೊಡಕಾಗುತ್ತಿತ್ತು. ಈ ವೇಳೆ ಅವರೆಲ್ಲ ಯಾವುದಾದರೊಂದು ಮಠ, ಮಂದಿರಗಳಲ್ಲಿ ತಂಗಿ, ಅಲ್ಲಿಯೇ ನಿತ್ಯ ನೈಮಿತ್ತಿಕ ಪೂಜೆ – ಪುನಸ್ಕಾರಗಳು, ಅಧ್ಯಯನ – ಅಧ್ಯಾಪನಗಳು ಹಾಗೆಯೇ ಪ್ರವಚನಗಳನ್ನು ನಡೆಸುತ್ತಿದ್ದರು. ಆ ಪರಿಸರದ ಎಲ್ಲಾ ಗ್ರಾಮಗಳ ಭಕ್ತಾದಿಗಳಿಗೆ ಇದರಿಂದ ದೇವರ ಪೂಜೆ, ಯತಿ ಪಾದಪೂಜೆ, ಭಿಕ್ಷೆ ಇತ್ಯಾದಿ ದೇವ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತಿತ್ತು. ಮಾತ್ರವಲ್ಲ ಯತಿಗಳ, ವಿಧ್ವಾಂಸರ ಪ್ರವಚನಗಳನ್ನು ಕೇಳುವ ಅವಕಾಶವೂ ಇರುತ್ತಿತ್ತು. ಚಾತುರ್ಮಾಸ್ಯ ಪುಣ್ಯಕಾಲದಲ್ಲಿ ಸನ್ಯಾಸಿಗಳಿಗೆ ಭಿಕ್ಷೆ ಸಮರ್ಪಿಸುವುದು ಅನಂತ ಪುಣ್ಯಪ್ರದ ಎಂದು ವರಾಹ ಪುರಾಣದಲ್ಲಿ ಹೇಳಲಾಗಿದೆ. ಆದರೆ, ಈಗ ರಸ್ತೆ ಸಂಪರ್ಕ, ಇಂಟರ್ನೆಟ್ ಸಂಪರ್ಕ, ವಾಹನಗಳ ಅನುಕೂಲ ಹಾಗೂ ಪ್ರತಿಕೂಲ ಹವಾಮಾನವನ್ನು ಎದುರಿಸುವ ಸೌಲಭ್ಯಗಳಿಂದಾಗಿ ಚಾತುರ್ಮಾಸ್ಯ ವೃತಾಚರಣೆ ನಾಲ್ಕು ಮಾಸಗಳಿಂದ ನಾಲ್ಕು ಪಕ್ಷಗಳಿಗೆ ಕಡಿತವಾಗಿದೆ. ಆದರೂ ಸ್ವಸ್ಥ ಜೀವನಕ್ಕಾಗಿ ಯತಿಗಳು ಮಾತ್ರವಲ್ಲದೆ ಸಮಸ್ತರೂ ಈ ವೃತಾಚರಣೆ ಕೈಗೊಂಡರೆ ತುಂಬಾ ಒಳ್ಳೆಯದು.
ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಪೂರ್ವಭಾವಿ ಪುರಪ್ರವೇಶವು ಇದೇ ಜುಲೈ 9ರ ಬುಧವಾರ ಸಂಜೆ 4.30 ಕ್ಕೆ ನಡೆಯಲಿದೆ. ಕೋಟೇಶ್ವರ ಬೈಪಾಸ್ ನಲ್ಲಿ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಎದಿರುಗೊಂಡು ವೈಭವದ ಮೆರವಣಿಗೆಯ ಮೂಲಕ ರಥಬೀದೀಯ ಶ್ರೀ ಕೋದಂಡ ರಾಮ ಮಂದಿರಕ್ಕೆ ಬರಮಾಡಿಕೊಳ್ಳಲಾಗುವುದು. ನಂತರ ಯತಿಗಳಿಂದ ಪೂಜೆ ನಡೆಯುವುದು. ಈ ಸ್ವಾಗತ ಮೆರವಣಿಗೆಗೆ ಮಾಗಣೆಯ ಸಹಸ್ರಾರು ಮಂದಿ ಹಾಗೂ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಬೇಕು ಎಂದು ಮಂದಿರ ಸಮಿತಿಯವರು ಬಿನ್ನವಿಸಿದ್ದು, ನಂತರ ವಾಪಾಸು ತೆರಳಲು ವಾಹನದ ವ್ಯವಸ್ಥೆ ಇರುವುದಗಿಯೂ ತಿಳಿಸಿದ್ದಾರೆ.
ಚಾತುರ್ಮಾಸ್ಯದ 2 ತಿಂಗಳ ಅವಧಿಯಲ್ಲಿ ಪ್ರತೀ ದಿನ ಬೆಳಿಗ್ಗೆ 8.30ರಿಂದ 9.30ರವರೆಗೆ ಶ್ರೀಗಳಿಂದ “ಸದಾಚಾರ ಸ್ಮೃತಿ” ಪಾಠ ನಡೆಯಲಿದೆ. ನಂತರ ಸಂಸ್ಥಾನ ಪೂಜೆ, ಯತಿ ಭಿಕ್ಷೆ ನಂತರ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಬೆಳಿಗ್ಗೆ 7.30 ರಿಂದ, 8.30ರಿಂದ ಹಾಗೂ ಮಧ್ಯಾಹ್ನ 3.30 ರಿಂದ 5.00 ಗೃಹ ಪಾದಪೂಜೆ ಅವಕಾಶವಿದೆ. ಸಂಜೆ 6.30ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ನಂತರ ಶ್ರೀಗಳಿಂದ / ವಿದ್ವಾಂಸರಿಂದ ಉಪನ್ಯಾಸ – ರಾತ್ರಿ ಪೂಜೆ / ಭೂತರಾಜ ಪೂಜೆ (ಸಂಕ್ರಾಂತಿ ದಿನ ಮಾತ್ರ) ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿರುತ್ತವೆ.
ಈ ಎರಡು ತಿಂಗಳ ಪರ್ವಕಾಲದಲ್ಲಿ ಸಮಸ್ತ ಮಾಗಣೆ ಬಂಧುಗಳು ಹಾಗೂ ಶ್ರೀ ಮಠದ ಅಭಿಮಾನಿ ಭಕ್ತರು ಯತಿಭಿಕ್ಷೆ, ರಾತ್ರಿ ಪೂಜೆ ಇತ್ಯಾದಿ ಸೇವೆಗಳನ್ನು ಸಲ್ಲಿಸಿ ಕೃತಾರ್ಥರಾಗಬೇಕು ಎಂದು ಕೋರಲಾಗಿದೆ. ಎರಡು ತಿಂಗಳ ಸುದೀರ್ಘ ಅವಧಿಯಲ್ಲಿ ನಡೆಯುವ ಈ ವೃತಾಚರಣೆ ಸಂದರ್ಭದಲ್ಲಿ ಯತಿಭಿಕ್ಷೆ, ಗೃಹ ಪಾದಪೂಜೆ ಇತ್ಯಾದಿ ಸೇವೆಗಳನ್ನು ಸಲ್ಲಿಸುವುದಲ್ಲದೆ, ಪ್ರತಿದಿನವೂ ದೇವರ ಪೂಜೆಗೆ ಹೂವು – ತುಳಸಿ, ಸಂತರ್ಪಣೆಗೆ ಹಸಿರುವಾಣಿ, ದಿನಸಿ ಹೊರೆ ಕಾಣಿಕೆಗಳನ್ನು ಸಲ್ಲಿಸುವುದು, ಭಜನೆ ನಡೆಸುವುದು ಇತ್ಯಾದಿಗಳ ಮೂಲಕವೂ ಭಕ್ತರು ಪಾಲ್ಗೊಳ್ಳಬೇಕು ಎಂದೂ ವಿನಂತಿಸಲಾಗಿದೆ. ಅಮೃತೋತ್ಸವಾಚರಣೆಯ ಸವಿನೆನಪಿಗಾಗಿ ಹೊರತರಲುದ್ದೇಶಿಸಿರುವ ಸ್ಮರಣ ಸಂಚಿಕೆಗೆ ಜಾಹೀರಾತುಗಳನ್ನು ನೀಡಿ ಸಹಕರಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಕೆ. ಎಸ್. ಸತ್ಯಮೂರ್ತಿಯವರ ಆತ್ಯಕ್ಷತೆಯ ಮಂದಿರ ಆಡಳಿತ ಸಮಿತಿಯು ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದಲ್ಲಿ ಉತ್ಸವಗಳ ಯಶಸ್ಸಿಗಾಗಿ ಕಾರ್ಯೋನ್ಮುಖವಾಗಿದೆ. ಸಹಕಾರ ನೀಡುವವರು ಮತ್ತು ಮಾಹಿತಿ ಅಪೇಕ್ಷಿತರು ಮೊಬೈಲ್ ಸಂಖ್ಯೆ 99640 26315 ಅಥವಾ 93438 88520 ಸಂಪರ್ಕಿಸುವಂತೆ ವಿನಂತಿಸಲಾಗಿದೆ.