ಡೈಲಿ ವಾರ್ತೆ: 08/ಜುಲೈ/2025

ಸುಳ್ಗೋಡಿನ‌ ಶಾಲಾ ಮುಖ್ಯ ಶಿಕ್ಷಕ ನೇಣು ಬಿಗಿದು ಆತ್ಮಹತ್ಯೆ

ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಸುಳ್ಗೋಡಿನ‌ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕುಬೇರ ಧರ್ಮ ನಾಯಕ್ ಯಾನೇ ಕುಬೇರಪ್ಪ (49) ಸೋಮವಾರ ಬೆಳಗ್ಗೆ ಶಾಲೆಗೆ ಹೋಗುವಾಗ ಕಮಲಶಿಲೆಯ ಪಾರೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೂಲತಃ ಚಿತ್ರದುರ್ಗದ ನಿವಾಸಿಯಾಗಿದ್ದ ಅವರು ಹೊಸಂಗಡಿ ಕೆಪಿಸಿ ಕಾಲನಿಯ ಸರಕಾರಿ ಕ್ವಾರ್ಟಸ್‌ನಲ್ಲಿ ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಸೋಮವಾರ ತಮ್ಮ ಬೈಕ್‌ನಲ್ಲಿ ಸುಳ್ಗೋಡಿನ‌ ಶಾಲೆಗೆ ಹೊರಟಿದ್ದ ಅವರು ಕಮಲಶಿಲೆಯ ಪಾರೆ ಬಳಿ ಬೈಕನ್ನು ರಸ್ತೆಯ ಬದಿಯಲ್ಲಿಟ್ಟು ರೈನ್ ಕೋಟ್ ಸಮೇತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2002ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ್ದ ಅವರು 22 ವರ್ಷಗಳ ಕಾಲ ಬೈಂದೂರು ವಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2022ರಲ್ಲಿ ಮುಖ್ಯ ಶಿಕ್ಷಕರಾಗಿ ಮುಂಭಡ್ತಿ ಹೊಂದಿ ಸುಳ್ಗೋಡಿನ‌ ಶಾಲೆಗೆ ವರ್ಗಾವಣೆಗೊಂಡಿದ್ದರು. ಅವರ ಆತ್ಮಹತ್ಯೆ ಹಿನ್ನಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಕುಬೇರಪ್ಪ ಅವರು ಹೊಸಂಗಡಿಯ ಕೆಪಿಸಿ ಕಾಲನಿಯಲ್ಲಿ ಹಿಟ್ಟಿನ ಗಿರಣಿ ಮತ್ತು ಕುರಿ-ಮೇಕೆ ಫಾರಂ ಮಾಡಿಕೊಂಡಿದ್ದರು. ಶ್ರಮ ವಹಿಸಿ ದುಡಿಯುತ್ತಿದ್ದ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು.
ಚಿಟ್ ಫಂಡ್‌ನಲ್ಲಿ ಸಾಲ ಮಾಡಿಕೊಂಡಿದ್ದು ಈ ಬಗ್ಗೆ ಸಾಲ ಪತ್ರವು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿತ್ತು ಎನ್ನಲಾಗಿದೆ. ಆದರೆ ಅವರ ಈ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.