


ಡೈಲಿ ವಾರ್ತೆ: 09/ಜುಲೈ/2025


ಬಿ.ಸಿ.ರೋಡ್ : ಕಾರ್ಮಿಕರ ಅಖಿಲ ಭಾರತ ಮುಷ್ಕರದ ಅಂಗವಾಗಿ ಕಾರ್ಮಿಕರ ಪ್ರತಿಭಟನೆ

ಬಂಟ್ವಾಳ : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರದ ಅಂಗವಾಗಿ ಜೆ.ಸಿ.ಟಿ.ಯು ಮತ್ತು ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ಬುಧವಾರ ನಡೆಯಿತು
ಪ್ರತಿಭಟನೆಯನ್ನುದ್ದೇಶಿಸಿ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಬಂಡವಾಳ ಶಾಹಿಗಳ ಹಿತ ಕಾಪಾಡಲು ಕೇಂದ್ರ ಸರಕಾರ ಮುಂದಾಗಿದೆ, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಕೂಡಾ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.
ರೈತರ ಫಲವತ್ತಾದ ಭೂಮಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಮೂಲಕ ರೈತರನ್ನು ಬೀದಿಪಾಲು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಂದಾಗಿದ್ದು ಇದರ ವಿರುದ್ಧ ರೈತ ಕಾರ್ಮಿಕ ಜನಪರ ಚಳುವಳಿಗಳು ಜೊತೆಯಾಗಿ ಹೋರಾಡ ಬೇಕೆಂದು ಕರೆ ನೀಡಿದರು.
ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ ಮಾತನಾಡಿ ಕೇಂದ್ರದ ಬಿ.ಜೆ.ಪಿ ಸರಕಾರದ 11 ವರ್ಷಗಳ ಆಡಳಿತದಲ್ಲಿ ದುಡಿಯುವ ಜನರ ಸಂಕಷ್ಟಗಳು ಮಿತಿಮೀರಿದೆ. ದುಡಿಯುವ ಜನತೆಗೆ ಕನಿಷ್ಠ ಕೂಲಿ ಕೂಡಾ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಪೋರೇಟ್ ಧಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮೋದಿ ಸರಕಾರ ಕಾರ್ಮಿಕರ ಎಂಟು ಗಂಟೆಗಳ ಕೆಲಸದ ಹಕ್ಕನ್ನು ಕಿತ್ತುಹಾಕಿ ವಾರದಲ್ಲಿ ಎಪ್ಪತ್ತು ಗಂಟೆ ದುಡಿಯುವಂತೆ ಕಾಯ್ದೆಯ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.
ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದಿಂದ ಜಾರಿಯಾದ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದ್ದು ಈ ಸಂಹಿತೆಗಳು ಜಾರಿ ಆದರೆ ಕಾರ್ಮಿಕರು ಕಾರ್ಪೊರೇಟ್ ವರ್ಗದ ಗುಲಾಮರಾಗಬೇಕಾಗುತ್ತದೆ ಹಾಗೂ ಕಾರ್ಮಿಕರ ಎಲ್ಲಾ ಹಕ್ಕುಗಳು ಕಸಿಯಲ್ಪಡುತ್ತದೆ ಎಂದ ಅವರು ಅಕ್ಷರ ದಾಸೋಹ ಹಾಗೂ ಎಲ್ಲಾ ಯೋಜನಾ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಎ.ಐ.ಸಿ.ಸಿ.ಟಿ.ಯು ರಾಜ್ಯ ಗೌರವಾದ್ಯಕ್ಷ ಮೋಹನ್ ಕೆ.ಇ ಪ್ರಾಸ್ತಾವನೆಗೈದರು. ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಶಾಹುಲ್ ಹಮೀದ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಜಯಶ್ರೀ , ಎ.ಐ.ಸಿ.ಸಿ.ಟಿ,ಯು, ಐ.ಪಿ.ಸಿ.ಎಲ್ ಘಟಕದ ಅದ್ಯಕ್ಷ ಪ್ರದೀಪ್, ಅಖಿಲ ಭಾರತ ಕಿಸಾನ್ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಮಹಾವೀರ್ ಜೈನ್ ಪುತ್ತೂರು, ಮುಖಂಡರಾದ ಸಂಜೀವ ಬೆಳ್ತಂಗಡಿ. ಸುಲೈಮಾನ್ ಕೆಲಿಂಜ, ಎ.ಐ.ಸಿ.ಸಿ.ಟಿ.ಯು ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕೊಯಿಲ , ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಮುಖಂಡರಾದ ಭರತ್ ಕುಮಾರ್, ವಿಶ್ವನಾಥ್, ಸಜೇಶ್ ವಿಟ್ಲ, ಲಿಯಕತ್ ಖಾನ್ ,ಕಟ್ಟಡ ಕಾರ್ಮಿಕರ ಸಂಘದ ಆನಂದ ಶೆಟ್ಟಿಗಾರ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಸುಧಾ ರಾವ್ ಬೆಳ್ತಂಗಡಿ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.