ಡೈಲಿ ವಾರ್ತೆ: 11/ಜುಲೈ/2025

24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ: ಪೊಲೀಸ್‌ ಠಾಣೆಗೆ ಬೆದರಿಕೆ ಸಂದೇಶ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ.

ಜು.10 ರ ಬೆಳಗ್ಗೆ 7:22 ಕ್ಕೆ ಈ ಇ-ಮೇಲ್ ಸಂದೇಶವನ್ನು ಎರಡು ಬಾರಿ ಕಳುಹಿಸಲಾಗಿದ್ದು, [email protected] ನಿಂದ ಭಟ್ಕಳ ಶಹರ ಠಾಣೆಯ [email protected] ಸಂದೇಶ ರವಾನಿಸಲಾಗಿದೆ.
ಜುಲೈ 10 ರ ಬೆಳಗ್ಗೆ ಬಂದ ಮೊದಲ ಇ-ಮೇಲ್ ಸಂದೇಶದಲ್ಲಿ ‘ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ ಟೌನ್’ ಎಂದು ಸಂದೇಶ ಕಳುಹಿಸಲಾಗಿದ್ದು, ನಂತರ ‘ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಹಾರ್ಸ್’ ಎಂದು ಸಂದೇಶ ಕಳುಹಿಸಲಾಗಿದೆ.

ಈ ಕುರಿತು ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇಂದು ಮುಂಜಾಗೃತ ಕ್ರಮವಾಗಿ ಭಟ್ಕಳ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು.
ಇದಲ್ಲದೇ, ಡ್ರೋನ್ ಕ್ಯಾಮೆರಾ ಮೂಲಕವೂ ಕಣ್ಗಾವಲಿಟ್ಟು ತಪಾಸಣೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಭಟ್ಕಳ ನಗರ ಸ್ಫೋಟಿಸುವ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದು, ತಪಾಸಣೆ ಕೈಗೊಂಡಿದ್ದಾರೆ.