


ಡೈಲಿ ವಾರ್ತೆ: 11/ಜುಲೈ/2025


ಧರ್ಮಸ್ಥಳ: ಹೂತಿಟ್ಟ ಹೆಣಗಳನ್ನು ತೋರಿಸುತ್ತೇನೆ ಎಂದಿದ್ದ ವ್ಯಕ್ತಿ ಕೋರ್ಟ್‌ಗೆ ಹಾಜರು

ದಕ್ಷಿಣ ಕನ್ನಡ: ಧರ್ಮಸ್ಥಳ ಸುತ್ತಮುತ್ತ ನಡೆದ ಹಲವಾರು ಅತ್ಯಾಚಾರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ಆ ಹೆಣಗಳನ್ನು ತಾನು ಹೂತು ಹಾಕಿದ್ದು ಅವುಗಳನ್ನು ಹೊರತೆಗೆದು ತೋರಿಸುತ್ತೇನೆ ಎಂದು ವಕೀಲರ ಮೂಲಕ ಪೊಲೀಸರಿಗೆ ಪತ್ರ ಬರೆದಿದ್ದ ವ್ಯಕ್ತಿ ಇಂದು ( ಜುಲೈ 11 ) ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ತಾನು ಒತ್ತಡಕ್ಕೊಳಗಾಗಿ ಕೊಲೆಯಾದ ಹೆಣಗಳನ್ನು ಹೂತಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಸತ್ಯ ಬಿಚ್ಚಿಡಲು ಸಿದ್ಧನಿರುವುದಾಗಿ ತಿಳಿಸಿದ್ದನು.
ಅದರಂತೆ ಜುಲೈ 4ರಂದು ದೂರನ್ನೂ ಸಹ ದಾಖಲಿಸಿದ್ದ ಆ ವ್ಯಕ್ತಿ ತನಿಖೆಗೆ ಸಿದ್ಧ ಎಂದು ಹೇಳಿಕೊಂಡಿದ್ದನು. ಇಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ಮುಂದೆ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ ತಿಳಿದುಬಂದಿದೆ.