


ಡೈಲಿ ವಾರ್ತೆ: 13/ಜುಲೈ/2025


ನೆಟ್ಲಮುಡ್ನೂರು| ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಅಭಿಯಾನ: ಮಾನವತಾವಾದಿಯಾಗಿ ಬದುಕೋಣ – ರಮಾನಾಥ ರೈ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ “ಜನಜಾಗೃತಿ ಅಭಿಯಾನ” ನೇರಳಕಟ್ಟೆಯಲ್ಲಿ ಶನಿವಾರ ಸಂಜೆ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಈ ರಾಷ್ಟ್ರದ ಸಂವಿಧಾನದಲ್ಲಿರುವ ಜಾತ್ಯತೀತ, ಧರ್ಮ ನಿರಪೇಕ್ಷತೆ, ಸಮಾಜವಾದ ಪದದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಮೋಸಮಾಡಿ ರಾಷ್ಟ್ರವನ್ನುಅಧಃಪತನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ನಾವು ಜಾತಿವಾದಿ , ಮತೀಯವಾದಿಗಳಾಗದೆ ಮಾನವತಾವಾದಿಯಾಗಿ ಬದುಕೋಣ ಎಂದು ಕರೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ಮಾತನಾಡಿ ಬಿಜೆಪಿಯವರು ರಾಜ್ಯದಾದ್ಯಂತ ಪಂಚಾಯತ್ ಕಛೇರಿಯ ಮುಂಬಾಗದಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಅವರು ಈ ದೇಶದ ಜನತೆಗೆ ಮಾಡಿರುವ ಅನ್ಯಾಯ, ಜನ ವಿರೋಧಿ ದುರಾಡಳಿತ, ಪೊಳ್ಳು ಭರವಸೆ ನೀಡಿ ವಂಚನೆ ಮಾಡಿರುವ ಬಗ್ಗೆ ಜನತೆಗೆ ಜನಜಾಗೃತಿ ಮೂಡಿಸುವ ಸಲುವಾಗಿ ಈ ಜನಜಾಗೃತಿ ಅಭಿಯಾನ ಸಹಕಾರಿಯಾಗಿದೆ ಎಂದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅದ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿದರು.

ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ ಸೋಜ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಐಡಾ ಸುರೇಶ್, ಬೂಡಾ ಅದ್ಯಕ್ಷ ಬೇಬಿ ಕುಂದರ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಶ್ರೀಧರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಿರಂಜನ್ ರೈ ಸ್ವಾಗತಿಸಿದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ, ಲಕ್ಷ್ಮಿ, ಮಾಜಿ ಅಧ್ಯಕ್ಷೆ ವಿಜಯಾ ಏಮಾಜೆ, ಬೂತ್ ಅಧ್ಯಕ್ಷರುಗಳಾದ ಸಕ್ಸಸ್ ಹಮೀದ್ ಕುಕ್ಕರಬೆಟ್ಟು, ಲತೀಫ್ ಪಂತಡ್ಕ ಸಹಕರಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.