ಡೈಲಿ ವಾರ್ತೆ: 13/ಜುಲೈ/2025

ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ: ಇತರ ಪ್ರಕರಣಗಳ ದಂಪತಿಗಳಿಗೆ ಮಾದರಿಯಾಗಲಿ – ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ

ಚನ್ನರಾಯಪಟ್ಟಣ: ತಾಲೂಕಿನ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಗಳು ಲೋಕ್ ಅದಾಲತ್‌ನಲ್ಲಿ ಒಂದಾದರು.

ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾಧೀಶರು ದಂಪತಿಗಳಿಗೆ ಬುದ್ದಿ ಹೇಳಿ ಮನ ವೊಲಿಸಿದ ಪರಿಣಾಮವಾಗಿ ಜೋಡಿಗಳು ಪುನರ್ ಒಂದಾದ ಸನ್ನಿವೇಶಕ್ಕೆ ನ್ಯಾಯಾಲಯದಲ್ಲಿದ್ದ ವಕೀಲರು, ಕಕ್ಷಿದಾರರು, ಸಾರ್ವಜನಿಕರು ಸಾಕ್ಷಿಯಾದರು.

ತಾಲೂಕು ಸಿವಿಲ್ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ ದಂಪತಿಗಳನ್ನು ಒಂದು ಮಾಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಕುಮಾರಿ, ದಂಪತಿಗಳು ಚಿಕ್ಕ ಚಿಕ್ಕ ವಿಚಾರ ಗಳಿಗೆ ಮನಸ್ಸು ಕೆಡಿಸಿಕೊಂಡು, ಕೆಲವೊಂದು ಸಲ ಬೇರೆಯವರ ಮಾತು ಕೇಳಿ ನ್ಯಾಯಾಲಯಗಳಿಗೆ ವಿಚ್ಚೇದನಕ್ಕೆ ಅಥವಾ ಜೀವನಾಂಶಗಳಿಗೆ ದಾವೆ ಹಾಕಿದ್ದು, ಅವರಿಗೆ ಕಳೆದ ಕೆಲವು ದಿನಗಳಿಂದ ನ್ಯಾಯಾಧೀಶರು, ಎರಡೂ ಕಡೆಯ ವಕೀಲರು ಬುದ್ದಿ ಹೇಳಿದ ಪರಿಣಾಮ ದಂಪತಿಗಳು ಪರಸ್ಪರ ಹಾರ ಬದಲಿಸಿಕೊಂಡು ಸಿಹಿ ತಿನ್ನಿಸಿ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಎಂದೂ ನ್ಯಾಯಾಲಯಕ್ಕೆ ದಾವೆ ಹಾಕಿಕೊಂಡು ಬರಬೇಡಿ ಎಂದು ಹೇಳಲಾಗಿದೆ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ, ಅವರ ಜೀವನ ಸುಖಕರ, ಸಂತೋಷ, ನೆಮ್ಮದಿಯಾಗಿ ಇರಲಿ ಎಂದು
ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ವಿ.ಕುಸುಮ ಹಾಗೂ ವಕೀಲರುಗಳು, ಕಕ್ಷಿ ದಾರರು, ಸಾರ್ವಜನಿಕರು, ಆರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

ಪುನಃ ಒಂದಾದ ದಂಪತಿಗಳು ಇತರ ಪ್ರಕರಣಗಳ ದಂಪತಿ ಗಳಿಗೆ ಮಾದರಿಯಾಗಲಿ. ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಸಂತೋಷದಿಂದ ಜೀವನ ಕಳೆಯಬೇಕು. ಇರುವುದೊಂದೇ ಜೀವನ, ಸಂತೋಷವಾಗಿ ಕಳೆಯಬೇಕು.
ಎ.ಅರುಣ ಕುಮಾರಿ ತಾಲೂಕು ಕಾನೂನು ಸೇವೆಗಳ
ಸಮಿತಿಯ ಅಧ್ಯಕ್ಷೆ