


ಡೈಲಿ ವಾರ್ತೆ: 17/ಜುಲೈ/2025


ಉಡುಪಿ: ಪೋಕ್ಸ್ ವಿಶೇಷ ಸರಕಾರಿ ಅಭಿಯೋಜಕರ ವಿರುದ್ದದ ಜಾತಿನಿಂದನೆ ಪ್ರಕರಣಕ್ಕೆ ತಡೆಯಾಜ್ಞೆ

ಉಡುಪಿ: ಜಿಲ್ಲೆಯ ಪೋಕ್ಸ್ ನ್ಯಾಯಾಲಯದ ವಿಶೇಷ
ಸರಕಾರಿ ಅಭಿಯೋಜಕರು ಸೇರಿದಂತೆ ಮನೋಜ್ ಹಾಗು ಸಂಜಯ್ ವಿರುದ್ದ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಜಾತಿನಿಂದನೆ ಪ್ರಕರಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಉಡುಪಿ ಮಹಿಳಾ ಠಾಣೆಯಲ್ಲಿ ಜು.15 ರಂದು ದಾಖಲಾಗಿದ್ದ ಜಾತಿನಿಂದನೆ ಪ್ರಕರಣವನ್ನು ಪ್ರಶ್ನಿಸಿ ಪೋಕ್ಸ್ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ವಿಚಾರಣೆ ನಡೆಸಿದ್ದ ನ್ಯಾ. ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ಪೀಠವು, ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ. ಪೋಕ್ಸ್ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರ ಪರವಾಗಿ ಹಿರಿಯ ನ್ಯಾಯವಾದಿ ಪಿಪಿ ಹೆಗ್ಡೆ ವಾದಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೋಕ್ಸ್ ವಿಶೇಷ ಸರಕಾರಿ ಅಭಿಯೋಜಕರು, ನಾನು ತಲೆಮರೆಸಿಕೊಂಡಿಲ್ಲ ನನ್ನ ಕಚೇರಿಯಲ್ಲಿಯೇ ಇದ್ದೇನೆ. ಬಿಎನ್‌ಎಸ್ ಕಾಯ್ದೆ ಪ್ರಕಾರ 14 ದಿನಗಳ ಪ್ರಾಥಮಿಕ ತನಿಖೆಯನ್ನು ನಡೆಸಿ, ಪ್ರಕರಣ ದಾಖಲಿಸಬೇಕಿತ್ತು. ಪೋಲಿಸರು ಒತ್ತಡಕ್ಕೆ ಮಣಿದು ಏಕಾಏಕಿ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ. ಅಲ್ಲದೇ ನನ್ನ ಕಚೇರಿಯಲ್ಲಿ ದೂರು ನೀಡಿದವರು ಕೆಲಸವನ್ನು ಬಿಟ್ಟು 8 ವರ್ಷ ಕಳೆದಿದೆ. ಈಗ, ಅಂದು ಜಾತಿ ನಿಂದನೆ ಮಾಡಿದ್ದೇನೆ ಎಂದು ದೂರು ನೀಡಿದ್ದಾರೆ. ಇದೊಂದು ಸುಳ್ಳು ಪ್ರಕರಣ ಎಂದು ತಿಳಿಸಿದ್ದಾರೆ.