


ಡೈಲಿ ವಾರ್ತೆ: 17/ಜುಲೈ/2025


ಬಂಟ್ವಾಳ ತಾಲೂಕಿನಾದ್ಯಂತ
ಭಾರೀ ಮಳೆ – ಹಲವು ಕಡೆ ಹಾನಿ

ಬಂಟ್ವಾಳ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಕಡೆ ಮಳೆ ಹಾನಿ ಪ್ರಕರಣಗಳು ಸಂಭವಿಸಿದೆ.

ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ರಸ್ತೆ ಬದಿ ಮಣ್ಣು ಕುಸಿಯುತ್ತಿದ್ದು ಮುನ್ನೆಚರಿಕೆಯಾಗಿ ಟೇಪ್ ಅಳವಡಿಸಲಾಗಿದೆ.

ಶಂಭೂರು ಗ್ರಾಮದ ಕೆಲೆಂಜಿಗುರಿ ಎಂಬಲ್ಲಿ ಉಲ್ಲಾಸ್ ಫ್ಯಾಕ್ಟರಿಯ ತಡೆಗೋಡೆಯು ದಿನೇಶ್ ಎಂಬವರಿಗೆ ಸೇರಿದ ತೋಟಕ್ಕೆ ಕುಸಿದು ಬಿದ್ದಿದೆ.
ಪುದು ಗ್ರಾಮದ ಅಮೆಮಾರ್ ನಿವಾಸಿ ಅಬ್ದುಲ್ ಖಾದರ್ ಬಿನ್ ಇದಿನಬ್ಬ ಅವರ ಮನೆ ಪೂರ್ತಿ ಹಾನಿಯಾಗಿದೆ. ಮನೆ ಮಂದಿ ಸ್ಥಳಾಂತರಗೊಂಡಿದ್ದಾರೆ.

ಕಾವಳಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ತೋಡಿಗೆ ಇರುವ ಕಾಲು ಸಂಕದ ಬದಿ ಕುಸಿತ ಉಂಟಾಗಿ ಅಪಾಯದ ಸ್ಥಿತಿಯಲ್ಲಿರುವುದರಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಸದ್ರಿ ಕಾಲು ದಾರಿ ಉಪಯೋಗಿಸುವ 4 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಬೇರೆ ಕಾಲು ದಾರಿ ಇದೆ.
ಕೇಪು ಗ್ರಾಮದ ಕಟ್ಟೆ ಎಂಬಲ್ಲಿ ತೋಡಿನ ಬದಿ ಕಲ್ಲಿನ ತಡೆಗೋಡೆ ಕುಸಿದು ನೀರ್ಕಜೆ-ಮಣಿಯರಪಾದೆ ರಸ್ತೆ ಬಿರುಕು ಬಿಟ್ಟಿದೆ. ರಸ್ತೆ ಕುಸಿದು ಬೀಳುವ ಸಂಭವವಿದ್ದು, ಮುಂಜಾಗೃತಾ ಕ್ರಮವಾಗಿ ರಸ್ತೆ ಬಂದ್ ಮಾಡಲಾಗಿದೆ. ಮೇರಮಜಲು ಗ್ರಾಮದ ಅಬ್ಬೆಟ್ಟು-ಪಾರಾಜೆ ಎಂಬಲ್ಲಿ ರಸ್ತೆಗೆ ಬಿದ್ದ ಮರವನ್ನು ಪಂಚಾಯತ್ ವತಿಯಿಂದ ತೆರವುಗೊಳಿಸಲಾಗಿದೆ.

ಕರಿಯಂಗಳ ಗ್ರಾಮದ ಕಲ್ಕುಟ್ಟ ಎಂಬಲ್ಲಿ ಗುಡ್ಡೆ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ.
ಅಮ್ಟಾಡಿ ಗ್ರಾಮದ ಕುಪ್ರಾಡಿ ಎಂಬಲ್ಲಿ ರಾಬರ್ಟ್ ಮೆನೇಜಸ್ ಬಿನ್ ಮೈಕಲ್ ಮೆನೆಜಸ್ ಅವರ ಜಮೀನಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ತೋಡಿಗೆ ಮಣ್ಣು ಬಿದ್ದು ನೀರು ತೋಟದಲ್ಲಿ ಹರಿಯುತ್ತಿದೆ.
ಬಂಟ್ವಾಳ ಕಸಬಾ ಗ್ರಾಮದ ಮಂಡಾಡಿ ನಿವಾಸಿ ಸಂಜೀವ ಬಿನ್ ಗುರುವ ಅವರ ವಾಸದ ಮನೆಯ ಗೋಡೆ ಹಾಗೂ ಶೌಚಾಲಯ ಗೋಡೆ ಕುಸಿದು ತೀವ್ರ ಹಾನಿ ಸಂಭವಿಸಿದೆ. ಮೇರಾಮಜಲು ಗ್ರಾಮದ ಅಬ್ಬೆಟ್ಟು ಪಾರಾಜೆ ರಸ್ತೆಗೆ ಗುಡ್ಡ ಜರಿದು ಮರ ರಸ್ತೆಗೆ ಬಿದ್ದಿದೆ.
ಶಂಭೂರು ಗ್ರಾಮದ ಕೆದುಕೋಡಿ ಎಂಬಲ್ಲಿ ಜಿಲ್ಲಾ ಮುಖ್ಯ ರಸ್ತೆ ಕುಸಿತ ಉಂಟಾಗಿದೆ.
ಪೆರುವಾಯಿ ಗ್ರಾಮದ ಕೆದುವಾರ್ ಎಂಬಲ್ಲಿ ಕುದ್ದುಪದವು-ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆಗೆ ಗುಡ್ಡ ಕುಸಿದಿರುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್ ಕಚೇರಿ ಮಾಹಿತಿ ತಿಳಿಸಿದೆ.