


ಡೈಲಿ ವಾರ್ತೆ: 20/ಜುಲೈ/2025


ಉಡುಪಿ| ಸರಕಾರಿ ವಸತಿ ಸಮುಚ್ಚಯಕ್ಕೆ ನುಗ್ಗಿದ ಕಳ್ಳರು, ಸಿಸಿ ಟಿವಿಯಲ್ಲಿ ಸೆರೆ

ಉಡುಪಿ: ನಗರ ಠಾಣೆಯ ಅನತಿ ದೂರದಲ್ಲಿರುವ
ಕಂದಾಯ ಇಲಾಖೆಯ ವಸತಿ ಸಮುಚ್ಛಯದಲ್ಲಿ ಜು.19 ಶನಿವಾರ ತಡರಾತ್ರಿಯಿಂದ ರವಿವಾರ ಮುಂಜಾನೆಯ ನಡುವೆ ಕಳ್ಳತನ ನಡೆದಿದೆ.
ಸುಮಾರು 3 ರಿಂದ 4 ಮಂದಿಯ ಕಳ್ಳರ ತಂಡ ಈ ಕೃತ್ಯ ನಡೆಸಿರುವ ಬಗ್ಗೆ ಸಮುಚ್ಚಯದ ಸಿಸಿಟಿವಿಯಲ್ಲಿ ದ್ರಶ್ಯಾವಳಿಗಳು ದಾಖಲಾಗಿವೆ.
ಸುಮಾರು 3 ಮನೆಗಳಿಗೆ ನುಗ್ಗಿರುವ ಕಳ್ಳರು ಸಾವಿರಾರು ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವರ್ಷದ ಹಿಂದೆಯಷ್ಟೇ ಈ ವಸತಿ ಸಮುಚ್ಚಯಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಆ ಸಮಯದಲ್ಲಿ ಇಲ್ಲಿ ಸಿಸಿಟಿವಿಯೂ ಇರಲಿಲ್ಲ. ಬಳಿಕ ನಿವಾಸಿಗಳೇ ಸೇರಿ ಸಿಸಿಟಿವಿ ಅಳವಡಿಕೆ ಮಾಡಿದ್ದರು. ವರ್ಷದ ಹಿಂದಿನ ಕಳ್ಳತನದ ಆರೋಪಿಗಳ ಪತ್ತೆ ಇನ್ನೂ ನಡೆದಿಲ್ಲ. ಈಗ ಮತ್ತೊಮ್ಮೆ ಕಳ್ಳತನ ನಡೆದಿರುವುದು ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.