


ಡೈಲಿ ವಾರ್ತೆ: 22/ಜುಲೈ/2025


ಜ್ಯುವೆಲ್ಲರಿ ಮೇಕಿಂಗ್ ಶಾಪ್ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, 2 ಕೋಟಿ ಚಿನ್ನ, ನಗದು ಜಪ್ತಿ!

ಕಲಬುರಗಿ: ಇತ್ತೀಚೆಗೆ ನಡೆದಿದ್ದ ಜ್ಯುವೆಲ್ಲರಿ ಮೇಕಿಂಗ್ ಶಾಪ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದ್ದು ಮೂವರು ಅಂತಾರಾಜ್ಯ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳಾದ ಅಯೋಧ್ಯಾಪ್ರಸಾದ್ ಚವ್ಹಾಣ್, ಫಾರೂಕ್ ಹಾಗೂ ಸೋಹೆಲ್ ಅಲಿಯಾಸ್ ಬಾದ್ ಶಾ ಬಂಧಿತ ಆರೋಪಿಗಳು.
ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಜು. 11ರಂದು ಮಲೀಕ್ ಜ್ಯೂವೇಲರಿ ಮೇಕಿಂಗ್ ಶಾಪ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದ್ದು, ಅವರಿಂದ 2.10 ಕೋಟಿ ರೂ. ಮೌಲ್ಯದ 2.860 ಕೆ.ಜಿ. ಚಿನ್ನಾಭರಣ ಮತ್ತು 4.80 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ವಿವರ:
ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ಎಂದಿನಂತೆ ವ್ಯಾಪಾರಸ್ಥರು, ಸಾರ್ವಜನಿಕರು ದೈನಂದಿನ ಕೆಲಸಗಳಲ್ಲಿ ತೊಡಗಿದ್ದರು. ಈ ವೇಳೆ, ಮಲಿಕ್ ಜ್ಯುವೆಲ್ಲರಿ ಮೇಕಿಂಗ್ ಶಾಪ್‌ಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಏಕಾಏಕಿ ನಾಲ್ಕು ಜನರ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಈ ವೇಳೆ ಶಾಪ್‌ನ ಮಾಲೀಕ ಶಫಕತುತ್ತಾ ಮಲೀಕ್ ಎಂಬುವರ ಹಣೆಗೆ ಸಿನಿಮೀಯ ಶೈಲಿಯಲ್ಲಿ ಗನ್ ಪಾಯಿಂಟ್ ಇಟ್ಟು, ಕುತ್ತಿಗೆಗೆ ಚಾಕು ಹಚ್ಚಿ ಹಗ್ಗದಿಂದ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಲ್ಲದೇ ಟೇಪ್ ಅಂಟಿಸಿ 3 ಕೆಜಿಗೂ ಅಧಿಕ ಚಿನ್ನದ ಆಭರಣ ದೋಚಿ ಶೆಟರ್ ಬಂದ್ ಮಾಡಿ ಎಸ್ಕೆಪ್ ಆಗಿದ್ದರು.
ಈ ಬಗ್ಗೆ ಬ್ರಹ್ಮಪುರ ಠಾಣೆಯಲ್ಲಿ ಶಾಪ್ ಮಾಲೀಕರು ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿದ್ದ ಪೊಲೀಸರು, ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಅಡಗಿಕೊಂಡಿದ್ದ ದರೋಡೆಕೋರರಾದ ಅಯೋಧ್ಯಾ ಪ್ರಸಾದ್ ಚವ್ಹಾಣ್, ಫಾರೂಕ್ ಮಲ್ಲಿಕ್ ಹಾಗೂ ಸೋಹೆಲ್ @ ಬಾದ್ ಶಾ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ 2.10 ಕೋಟಿ ರೂ. ಮೌಲ್ಯದ 2.860 ಕೆ.ಜಿ. ಚಿನ್ನಾಭರಣ ಮತ್ತು 4.80 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದೆ.
ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ಫಾರೂಕ್ ಹಾಗೂ ಅಂಗಡಿಯ ಮಾಲೀಕ ಮಲ್ಲಿಕ್ ಇಬ್ಬರು ಸ್ನೇಹಿತರು. ಕಲಬುರಗಿಯಲ್ಲೇ ಚಿನ್ನದ ವ್ಯಾಪಾರ ಮಾಡುತ್ತಿದ್ದರು. ಫಾರೂಕ್ ವ್ಯಾಪಾರದಲ್ಲಿ ನಷ್ಟವಾಗಿ 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಇತ್ತ ತನ್ನ ಸ್ನೇಹಿತ ಮಲ್ಲಿಕ್‌ನ ವ್ಯಾಪಾರ ಚೆನ್ನಾಗಿದ್ದರಿಂದ ಹೊಟ್ಟೆಕಿಚ್ಚಿನಿಂದ ಫಾರೂಕ್ ತನ್ನ ಸಹಚರರೊಂದಿಗೆ ಸೇರಿಕೊಂಡು ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ ಅಯೋಧ್ಯಾ ಪ್ರಸಾದ್ ಚವ್ಹಾಣ್ ಹಾಗೂ ಇತರರು ಸೇರಿಕೊಂಡು ಜುಲೈ11 ರಂದು ಲೈಟರ್ ಮಾದರಿಯ ಗನ್ ಹಾಗೂ ಚಾಕು ಹಿಡಿದು ಗ್ರಾಹಕರ ಸೋಗಿನಲ್ಲಿ ಮಲ್ಲಿಕ್ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದರು. ಸಿನಿಮೀಯ ರೀತಿಯಲ್ಲಿ ಅಂಗಡಿ ಮಾಲೀಕನನ್ನು ಹೆದರಿಸಿ ದರೋಡೆ ಕೂಡ ಮಾಡಿದ್ದರು.
ದರೋಡೆ ಬಳಿಕ ನಡೆದುಕೊಂಡು ತಹಶೀಲ್ದಾರ್ ಕಚೇರಿ ಬಳಿ ಬಂದು ಆಟೋ ಏರಿ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದ್ದ ದರೋಡೆಕೋರರು, ಅಲ್ಲಿಂದ ಸಾರಿಗೆ ಬಸ್‌ನಲ್ಲಿ ಮುಂಬೈಗೆ ಪರಾರಿಯಾಗಿದ್ದರು. ಮುಂಬೈನಲ್ಲಿ ಕದ್ದ 3 ಕೆಜಿ ಚಿನ್ನದಲ್ಲಿ ಸ್ವಲ್ಪ ಆಭರಣವನ್ನ ಕರಗಿಸಿ ಮಾರಾಟ ಮಾಡಿ ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಇದೆಲ್ಲ ತನಿಖೆಯಿಂದ ತಿಳಿದು ಬಂದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಬಜ್ಜಿ ತಿಂದು ಪೋನ್ ಪೇ ಮಾಡಿದ್ದ ದರೋಡೆಕೊರರು:
ದರೋಡೆ ಬಳಿಕ ಆರೋಪಿಗಳು ಪದೇ ಪದೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ದರೋಡೆಗೂ ಮುನ್ನ ಗ್ಯಾಂಗ್ ಬೆಳಗ್ಗೆ 9 ಗಂಟೆಗೆ ಜ್ಯುವೆಲ್ಲರಿ ಶಾಪ್ ವಾಚ್ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆ ಹಿಂಬದಿಯೇ ನಿಂತು ಪರಸ್ಪರ ಮೀಟಿಂಗ್ ಸಹ ಮಾಡಿದ್ದಾರೆ. ಅಲ್ಲಿಯೇ ಸಮೀಪವಿದ್ದ ಹೋಟೆಲ್‌ನಲ್ಲಿ ಬಜ್ಜಿ ತಿಂದು ಪೋನ್ ಪೇ ಮಾಡಿದ್ದರು. ಕೆಲಸದ ಬಳಿಕ ಎಸ್ಕೆಪ್ ಆಗುವ ಸಮಯದಲ್ಲಿ ಬಸ್ ನಿಲ್ದಾಣದ ಬಳಿ ಟೀ ಕುಡಿದು ಅಲ್ಲಿಯೂ ಫೋನ್ ಪೇ ಮಾಡಿದ್ದಾರೆ. ಸಿಸಿಟಿವಿ ಕ್ಯಾಮರಾ, ಟೆಕ್ನಿಕಲ್ ಎವಿಡೆನ್ಸ್ ಹಾಗೂ ಟವರರ್ ಲೊಕೇಶನ್ ಹಾಕಿಕೊಂಡು ಪೊಲೀಸರ ತಂಡ 11 ದಿನದ ಬಳಿಕ ದರೋಡೆ ಗ್ಯಾಂಗ್‌ನ ಮೂವರು ಆರೋಪಿಗಳನ್ನ ಲಾಕ್ ಮಾಡಿ ಜೈಲಿಗಟ್ಟಿದೆ. ಯುಪಿ ಮೂಲದ 2-2 ಆರೋಪಿ ಅಯೋಧ್ಯಾಪ್ರಸಾದ್ ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲೇ ವಾಸ ಮಾಡುತ್ತಿದ್ದ. ಈತನ ಮೇಲೆ 15ಕ್ಕೂ ಹೆಚ್ಚು ಕಳ್ಳತನ, ದರೋಡೆ ಕೇಸ್‌ಗಳು ದಾಖಾಲಗಿದ್ದು, ಎಲ್ಲದರ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಸಾರ್ವಜನಿಕರು ಭಯಪಡುವ ರೀತಿಯಲ್ಲಿ ನಗರದ ಸರಾಫ್ ಬಜಾರ್‌ನಲ್ಲಿ ಇತ್ತೀಚೆಗೆ ದರೋಡೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಡಾಗ್ ಸ್ಕಾಡ್, ಎಫ್‌ಎಸ್‌ಎಲ್ ಟೀಂ, ಬೆರಳಚ್ಚು ತಜ್ಞರು ಹಾಗು ಸೋಕೋ ಟೀಂ ಜೊತೆಗೆ ಸ್ಥಳ ಪರಿಶೀಲನೆ ಮಾಡಲಾಗಿತ್ತು. ದರೋಡೆಕೋರ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನಿರಂತರ ಸಂಪರ್ಕ ಸಾಧನದಿಂದ ತಂಡವೊಂದು ಈ ಪ್ರಕರಣವನ್ನು ಯಶಸ್ವಿಯಾಗಿದೆ ಎಂದು ಡಾ. ಶರಣಪ್ಪ ತಿಳಿಸಿದ್ದಾರೆ.