ಡೈಲಿ ವಾರ್ತೆ: 24/ಜುಲೈ/2025

ಉಡುಪಿ| ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಪಾಲದ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮ

ಉಡುಪಿ: ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ ಆಟಿ ಅಮವಾಸ್ಯೆಯ ಅಂಗವಾಗಿ ಜು. 24 ರಂದು ಗುರುವಾರ ಬೆಳಿಗ್ಗೆ 5.30ಕ್ಕೆ ಉಡುಪಿ ಕ್ಲಾಕ್ ಟವರ್ ಸಮೀಪ ಸಾರ್ವಜನಿಕರಿಗೆ ಪಾಲೆದ ಕೆತ್ತೆ ಕಷಾಯ ವಿತರಿಸಲಾಯಿತು.

ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿರವರು ತುಳುನಾಡ ರಕ್ಷಣಾ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ರೋಹಿತ್ ಕರಂಬಳ್ಳಿ ರವರಿಗೆ ಪಾಲೆದ ಕಷಾಯ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಾರು 500 ಕ್ಕಿಂತಲೂ ಹೆಚ್ಚು ಜನರು ಪಾಲೆದ ಕೆತ್ತೆ ಕಷಾಯ ಸ್ವೀಕರಿಸಿದರು.

ಆಟಿ ಅಮಾವಾಸ್ಯೆ ಪಾಲೆ ಕೆತ್ತೆ ಕಷಾಯ ತಯಾರಿಸುವ ಜವಾಬ್ದಾರಿ ಜಯರಾಮ್ ಪೂಜಾರಿ ಮತ್ತು ಯುವ ಉಪಾಧ್ಯಕ್ಷ ರಾಹುಲ್ ಪೂಜಾರಿರವರು ಸಮರ್ಥವಾಗಿ ನಿಭಾಯಿಸಿದ್ದಾರೆ.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ ಮಾತನಾಡುತ್ತಾ
ತುಳುನಾಡು ಜನರು ‘ಪಾಲೆ ಮರ’ದ/’ಸಪ್ತಪರ್ಣಿ’ಮರದ ತೊಗಟೆಯನ್ನು ಕೆತ್ತಿ ಅದರಿಂದ ಕಷಾಯ/ಮದ್ದನ್ನು ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ತುಳುನಾಡಿನಲ್ಲಿ ಆಟಿ ಎಂಬುದು ಒಂದು ತಿಂಗಳಿನ ಹೆಸರಾಗಿದೆ. ಆಟಿ ತಿಂಗಳನ್ನು ಅನಿಷ್ಟ ತಿಂಗಳೆಂದೂ ಕರೆಯುತ್ತಾರೆ. ಏಕೆಂದರೆ, ಆಟಿ ತಿಂಗಳಲ್ಲಿ ಕ್ರಿಮಿಕೀಟಗಳ ತೊಂದರೆ ಅಧಿಕವಾಗಿರುವುದರ ಜೊತೆಗೆ ಅಧಿಕವಾದ ಮಳೆಯೂ ಇರುತ್ತದೆ. ಈ ಸಂದರ್ಭದಲ್ಲಿ ಮನೆಬಿಟ್ಟು ಹೊರಹೋಗಲಾಗುವುದಿಲ್ಲ. ಹೀಗಾಗಿ ಆಟಿ ತಿಂಗಳನ್ನು ಅನಿಷ್ಟವೆಂದು ಕರೆಯುತ್ತಾರೆ ಅಥವಾ ಅನಿಷ್ಟವೆಂಬ ನಂಬಿಕೆಯಿದೆ. ಈ ಅನಿಷ್ಟಗಳನ್ನೆಲ್ಲ ಕಳೆಯಲು ಆಟಿ ಕಳಂಜೆ ಬರುತ್ತಾನೆ ಎಂಬ ವಾಡಿಕೆ ತುಳುನಾಡಿನಲ್ಲಿದೆ.
ಆಟಿ ಅಮಾವಾಸ್ಯೆ ದಿನದಂದು ಕಹಿ ರುಚಿಯ ಹಾಲೆ ಮರದ ಕಷಾಯವನ್ನು ಕುಡಿಯುವುದರಿಂದ ಅನಾರೋಗ್ಯವು ಕಮ್ಮಿಯಾಗುತ್ತದೆ ಹಾಗೂ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಔಷಧೀಯ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಪಾಲೆದ ಕಷಾಯ ಸೇವಿಸಿದಾಗ ಅದರ ಸಂಪೂರ್ಣ ಉಪಯೋಗವಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ , ಸುರೇಂದ್ರ ಪೂಜಾರಿ, ವೈದ್ಯರ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಸನಿಲ್, ಮಹಿಳಾ ಜಿಲ್ಲಾಧ್ಯಕ್ಷ ಸುನಂದಾ ಕೋಟ್ಯಾನ್, ಜಿಲ್ಲಾ ಜೊತೆ ಕಾರ್ಯದರ್ಶಿ,
ಪ್ರೀತಮ್ ದಿಕೋಸ್ತ, ನಿರ್ಮಲಾ ಮೆಂಡನ್,
ಬದ್ರುಲ ಅಬ್ದುಲ್ಲಾ, ರಾಜು ಮತ್ತಿತರರು ಉಪಸ್ಥಿತರಿದ್ದರು.