ಡೈಲಿ ವಾರ್ತೆ: 24/ಜುಲೈ/2025

ಹೊಸಂಗಡಿ ಕಾಲೇಜಿನಲ್ಲಿ ರುಡ್ ಸೆಟ್ ಸಂಸ್ಥೆಯಿಂದ ಸ್ವ- ಉದ್ಯೋಗ ಅರಿವು ಕಾರ್ಯಕ್ರಮ

ಹೊಸಂಗಡಿ: ಹೊಸಂಗಡಿ ಕಾಲೇಜಿನಲ್ಲಿ ರುಡ್ ಸೆಟ್ ಸಂಸ್ಥೆಯಿಂದ ಸ್ವ- ಉದ್ಯೋಗ ಅರಿವು ಕಾರ್ಯಕ್ರಮ ಜು.15 ರಂದು ಮಂಗಳವಾರ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಮತ್ತು ರುಡ್ಸೆಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಸ್ವ- ಉದ್ಯೋಗ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ ವಲಯದ ಉಪನ್ಯಾಸಕರಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಇವರು ಪದವಿ ಪೂರ್ವ ಶಿಕ್ಷಣದ ನಂತರ ಅಥವಾ ವಿದ್ಯಾರ್ಥಿಗಳ ರಜೆಯ, ಬಿಡುವಿನ ಸಮಯದಲ್ಲಿ ರುಡ್ಸೆಟ್ ಸಂಸ್ಥೆ ನೀಡುವ ಉಚಿತ ತರಭೇತಿಗಳನ್ನು ಪಡೆದುಕೊಂಡು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಹೊಲಿಗೆ ತರಬೇತಿ, ಕೈ ಕಸೂತಿ, ಮಿಷನ್ ವರ್ಕ್, ಎಂಬ್ರಾಡರಿ , ನಾನಾ ಉಡುಪುಗಳ ತಯಾರಿ, ಕೃಷಿ ಚಟುವಟಿಕೆ, ಮಲ್ಲಿಗೆ ಕೃಷಿ, ಹೈನುಗಾರಿಕೆ,ಹಪ್ಪಳ, ಉಪ್ಪಿನಕಾಯಿ, ವಿವಿಧ ಪುಡಿಗಳ ತಯಾರಿಕೆ, ಸಿಸಿಟಿವಿ , ಮೊಬೈಲ್, ಮೋಟಾರ್ ರಿಪೇರಿ, ಕಂಪ್ಯೂಟರ್ ತರಬೇತಿ ಹೀಗೆ ಹತ್ತು ಹಲವು ಯೋಜನೆಗಳ ಕುರಿತು ಸವಿಸ್ತಾರವಾಗಿ ತಿಳಿಸಿ, ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಸ್ವಾವಲಂಬಿ ಬದುಕನ್ನಾಗಿ ಪರಿವರ್ತಿಸಿಕೊಳ್ಳಬಹುದೆಂದು ತಿಳಿಸಿದರು. ಉನ್ನತ ವ್ಯಾಸಂಗದ ಜೊತೆ ಜೊತೆಗೆ ಏ ಕಲಿಕೆಗಳು ಪೂರಕವಾಗುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನಗಾಣಿಸಿದರು.

ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ವೀಣಾ ಉಪನ್ಯಾಸಕಿ ರುಡ್ ಸೆಟ್ ಸಂಸ್ಥೆ ಮಾತನಾಡಿ, ಹೆಣ್ಣು ಮಕ್ಕಳು ಸಶಕ್ತರಾಗಿ ಬೆಳೆಯಲು ಇಂತಹ ತರಬೇತಿಗಳು ಅವಶ್ಯಕ, ಅವು ನಮ್ಮನ್ನು ಇನ್ನಷ್ಟು ಸದೃಢರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಪರೀಕ್ಷಾ ನಂತರದ ಸಮಯವನ್ನು ವ್ಯರ್ಥವಾಗಿ ಕಳೆಯದೆ, ರುಡ್ ಸೆಟ್ ಸಂಸ್ಥೆಯಿಂದ ಸಿಗುವ ಉಚಿತ ತರಬೇತಿಗಳನ್ನು ಪಡೆದು ಜೀವನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ರಣಜಿತ್ ಕುಮಾರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಕಾರ್ಯಕ್ರಮವನ್ನು ಕನ್ನಡ ಉಪಾನ್ಯಾಸಕಿ, ಶ್ರೀಮತಿ ವೈಶಾಲಿ ಹೆಬ್ಬಾರ್ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಅಕ್ಷಯ್ ಹೆಗ್ಡೆ ಸ್ವಾಗತಿಸಿದರು ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕುಮಾರಿ ಶ್ರುತಿ ಶೆಟ್ಟಿ ವಂದಿಸಿದರು.