


ಡೈಲಿ ವಾರ್ತೆ: 29/ಜುಲೈ/2025


ಸುಜ್ಞಾನ ಎಜುಕೇಶನ್ ಟ್ರಸ್ಟಿನಲ್ಲಿ ಸಡಗರದ ನಾಗರ ಪಂಚಮಿ – ಚಿಣ್ಣರಿಗೆ ಪರಿಸರ ಸಂಬಂಧದ ಅರಿವು ಮೂಡಿಸಲು ಒತ್ತು

ಕುಂದಾಪುರ: ಸಣ್ಣಗೆ ಜಿನುಗುವ ಮಳೆ…ಪ್ರಕೃತಿ ಮಾತೆ ಹಸಿರು ಸೀರೆ ಉಟ್ಟು ಸಿಂಗಾರಗೊಂಡಿರುವಂತೆ ಕಾಣುವ ಪ್ರಶಾಂತವಾದ ವಾತಾವರಣ, ನಿಧಾನಕ್ಕೆ ಕೇಳಿ ಬರುತ್ತಿರುವ ಘಂಟೆಯ ನಿನಾದ, ಕಣ್ಣುಮುಚ್ಚಿ, ಶ್ರದ್ಧೆಯಿಂದ ಕೈ ಮುಗಿದು ನಿಂತ ಚಿಣ್ಣರು…ಈ ಭಕ್ತಿಪರವಶ ವಾತಾವರಣ ನೋಡಿದರೆ ನಾಗದೇವತೆಯೇ ಒಲಿದು ಬರುತ್ತಾಳೇನೋ ಅನ್ನುವ ಹಾಗೇ ಇತ್ತು. ಹೌದು ಇದು ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ, ಸುಜ್ಞಾನ ಎಜುಕೇಶನ್ ಟ್ರಸ್ಟ್ನಲ್ಲಿ ನಡೆದ ನಾಗರಪಂಚಮಿ ಹಬ್ಬದ ಸಂಭ್ರಮ.

ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವೇ ನಾಗರಪಂಚಮಿ. ಇದು ಪರಿಸರದೊಂದಿಗೆ ಜೀವದ ಸಂಬಂಧ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಎತ್ತಿ ಹಿಡಿಯುವ ಸಂಭ್ರಮದ ಹಬ್ಬವಾಗಿದೆ. ಆಧುನಿಕ ಜೀವನದತ್ತ ಮುಖಮಾಡಿರುವ ಯುವಜನತೆಗೆ ಈಗ ಹಬ್ಬಹರಿದಿನಗಳ ಆಚರಣೆ, ಅದರ ಪ್ರಾಮುಖ್ಯದ ಬಗ್ಗೆ ಸರಿಯಾದ ಅರಿವಿಲ್ಲ! ಮಕ್ಕಳು ತಮ್ಮ ದಿನದ ಬಹುಪಾಲು ಸಮಯ ಕಳೆಯುವ ಶಾಲೆಯಲ್ಲಿ ನಮ್ಮ ಹಬ್ಬ ಹರಿದಿನಗಳ ಆಚರಣೆ, ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವುದು ಈಗ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರಣ್ಯ ಸ್ಕೂಲ್ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಅದ್ಧೂರಿಯಾಗಿ ಆಚರಿಸಿ ಮಕ್ಕಳಿಗೆ ನಾಗರಪಂಚಮಿಯ ಮಹತ್ವದ ಅರಿವು ಮೂಡಿಸಿದರು.ಶಾಲೆಯ ವಿದ್ಯಾರ್ಥಿಗಳು ನಾಗರ ಪಂಚಮಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟರು.

ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ ಹಾಗೂ ಸಂಸ್ಥೆಯ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.