


ಡೈಲಿ ವಾರ್ತೆ: 30/ಜುಲೈ/2025


ನೂರಾರು ಶವ ಹೂತಿಟ್ಟ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ 1995 ರಿಂದ ಕೆಲಸ ಮಾಡಿದ ಪೊಲೀಸರ ಪಟ್ಟಿ ಕೇಳಿದ ಎಸ್ಐಟಿ

ಮಂಗಳೂರು: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಶೋಧ ಕಾರ್ಯ ಹಾಗೂ ತನಿಖೆ ತೀವ್ರಗೊಂಡಿದೆ. ಒಂದೆಡೆ, ದೂರುದಾರ ತಿಳಿಸಿರುವ ಸ್ಥಳಗಳಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದರೆ, ಮತ್ತೊಂದೆಡೆ, 1995 ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಪಟ್ಟಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಎಸ್ಐಟಿ ಮನವಿ ಮಾಡಿದೆ.
ಮತ್ತೊಂದೆಡೆ, ಹೂತಿಡಲಾಗಿತ್ತು ಎನ್ನಲಾದ ಶವಗಳ ಶೋಧಕ್ಕೆ ಉತ್ಖನನ ಕಾರ್ಯ ಆರಂಭವಾಗಿದೆ. ಎರಡನೇ ದಿನವಾದ ಬುಧವಾರ ಬೆಳಗ್ಗೆ ಸಮಾಧಿ ಇರುವ ಸ್ಥಳಕ್ಕೆ ಎಸ್ಐಟಿ ತಂಡ ತೆರಳಿದಾಗ ಮಳೆ ಬಂದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ನಂತರದಲ್ಲಿ ಇದೀಗ ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ. ಸದ್ಯಕ್ಕೆ ಒಂದೇ ಕಡೆ ಸಮಾಧಿ ಅಗೆಯಲು ಎಸ್ಐಟಿ ತಂದ ನಿರ್ಧರಿಸಿದೆ. 30 ಸಿಬ್ಬಂದಿ ಜೊತೆ 20 ಜನ ಪೌರ ಕಾರ್ಮಿಕರಿಂದ ಉತ್ಖನನ ನಡೆಯುತ್ತಿದೆ.