ಡೈಲಿ ವಾರ್ತೆ: 09/ಆಗಸ್ಟ್/ 2025

ಪಡುಬಿದ್ರಿ| ಪತಿಯ ಮನೆಯವರಿಂದ ವರದಕ್ಷಿಣೆ ಕಿರುಕುಳ: ವಿದೇಶದಿಂದ ಮೊಬೈಲ್ ನಲ್ಲೇ ತಲಾಖ್ ನೀಡಿದ ಪತಿರಾಯ, ಪತ್ನಿಯಿಂದ ಠಾಣೆಗೆ ದೂರು

ಪಡುಬಿದ್ರಿ: ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಇದೀಗ ವಿದೇಶದಲ್ಲಿರುವ ಪತಿ ಅಲ್ಲಿಂದ ಮೊಬೈಲ್‌ನಲ್ಲೇ ತಲಾಖ್ ನೀಡಿದ್ದಾಗಿ ತೆಂಕ ಗ್ರಾಮದ ನಿವಾಸಿ ಸುಹಾನಾ (28) ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಎರ್ಮಾಳು ಗುಜ್ಜಿಹೌಸ್‌ನ ಮುಬೀನ್ ಶೇಖ್ ಎಂಬವರನ್ನು 2024ರ ಅಕ್ಟೋಬರ್‌ನಲ್ಲಿ 12.5 ಪವನ್ ಬಂಗಾರ ವರದಕ್ಷಿಣೆ ಮದುವೆ ಮಾಡಿಸಿದ್ದರು. ಮದುವೆಗೆ 20 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ ತಿಂಗಳ ಬಳಿಕ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸತೊಡಗಿದ್ದು, ಆಗಲೇ ವಿದೇಶಕ್ಕೆ ತೆರಳಿದ್ದರು. ಇದೀಗ ಜುಲೈ 15ರಂದು ಇಲ್ಲ ಸಲ್ಲದ ಆರೋಪವೆಸಗಿ ಮೊಬೈಲ್‌ನಲ್ಲೇ ತಲಾಖ್ ನೀಡಿರುವುದಾಗಿ ಸುಹಾನಾ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ನಂತರದಲ್ಲಿ ಪತಿಯ ಮನೆಯಲ್ಲಿ ಮಾವ ಉಮ್ಮರ್ ಸಾಹೇಬ್, ಅತ್ತೆ ಅಬೀದಾ, ಮೈದುನ ಮುಕ್ತಾರ್, ನಾದಿನಿ ರಿಹಾನಾ, ರಶೀನ್ ಹಾಗೂ ರಿಹಾನಾಳ ಪತಿ ಶಾಹೀದ್‌ರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಅನುಭವಿಸಿದ್ದೇನೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಒಂದು ಬಾರಿ ತಂದೆ ನನ್ನನ್ನು ನೋಡಲು ಬಂದಿದ್ದಾಗ ನಾದಿನಿ ರಶೀನ್ ಕೈಯಿಂದ ಅವರ ಬೆನ್ನಿಗೆ ಹೊಡೆದಿದ್ದಾಳೆ. ಕಳೆದ ಡಿಸೆಂಬರ್‌ನಲ್ಲಿ ಪತಿ ವಿದೇಶಕ್ಕೆ ಹೋಗಿದ್ದು, ಆ ಬಳಿಕ ಪತಿಯ ಮನೆಯವರ ವರದಕ್ಷಿಣೆ ಕಿರುಕುಳವೂ ಹೆಚ್ಚಾಗಿತ್ತು. ಇದೀಗ ಪತಿ ಮೊಬೈಲ್ ಮೂಲಕ ತಲಾಖ್ ನೀಡಿದ್ದಾಗಿ ಸುಹಾನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.