ಡೈಲಿ ವಾರ್ತೆ: 10/ಆಗಸ್ಟ್/ 2025

ಬ್ರಹ್ಮಾವರ| ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತ ಭಾಷಾ ದಿನದ ಆಚರಣೆ

ಬ್ರಹ್ಮಾವರ: ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಚೇರ್ಕಾಡಿ ಬ್ರಹ್ಮಾವರ ಇಲ್ಲಿನ ಕಾಲೇಜು ಆವರಣದಲ್ಲಿ ರಕ್ಷಾಬಂಧನದ ಆಚರಣೆಯನ್ನು ಆ. 9 ರಂದು ಶನಿವಾರ ಬೆಳಿಗ್ಗೆ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರಗಳು ದಕ್ಷಿಣ ವಲಯ ಇದರ ಕಾರ್ಯದರ್ಶಿಗಳಾಗಿರುವ ಜಯಣ್ಣ ಇವರು ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಬಹು ಧರ್ಮ ಬಹು ಜಾತಿಗಳ ಈ ದೇಶದಲ್ಲಿ ನಾವೆಲ್ಲ ಒಂದಾಗಿ ಸಹೋದರತೆಯ ಭಾವದಲ್ಲಿ ಬದುಕಬೇಕು. ರಕ್ಷೆಗೆ ಭಾರತೀಯರನ್ನು ಒಂದುಗೂಡಿಸುವ ಶಕ್ತಿ ಇದೆ. ರಕ್ಷೆಯಲ್ಲಿರುವ ಅನೇಕ ದಾರದ ಎಳೆಗಳು ನಮ್ಮಲ್ಲಿರುವ ಬೇರೆ ಬೇರೆ ಭಾವಗಳನ್ನು ಬದಿಗಿರಿಸಿ ಐಕ್ಯತಾಭಾವವನ್ನು ಮೂಡಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ವಿಷಯ ತಜ್ಞರು ಆಗಿರುವ ಪ್ರದೀಪ್ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ರಕ್ಷಾಬಂಧನದ ಆಚರಣೆಯ ಮೂಲಕ ನಿಮ್ಮೆಲ್ಲರ ಆಸೆಗಳು ಈಡೇರಲಿ. ನಿಮ್ಮ ಸುತ್ತಮುತ್ತಲಿರುವ ಸಂಬಂಧಿಗಳು ಮತ್ತು ಜನರ ಮೇಲೆ ನಿಮಗೆ ನಂಬಿಕೆ ಮೂಡಿ ಬರಲಿ ಎಂದರು.
ವಿದ್ಯಾರ್ಥಿ ನರಹರಿ ಭಟ್ ಸಂಸ್ಕೃತ ಭಾಷಾ ದಿನದ ಮಹತ್ವವನ್ನು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾಗ್ಯಶ್ರೀ ಐತಾಳ್ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಶುಭಾಶಯ ಸಲ್ಲಿಸಿದರು.

ಬಳಿಕ ವಿದ್ಯಾರ್ಥಿಗಳು ಗೌರವಾನ್ವಿತ ಅತಿಥಿಗಳಿಂದ ರಕ್ಷೆಯನ್ನು ಕಟ್ಟಿಸಿಕೊಂಡು ಅವರ ಆಶೀರ್ವಾದವನ್ನು ಪಡೆದರು.

ಹಿಂದಿ ಭಾಷಾ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ, ಕನ್ನಡ ಭಾಷಾ ಉಪನ್ಯಾಸಕ ಶ್ರೀ ರಮೇಶ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.