


ಡೈಲಿ ವಾರ್ತೆ: 11/ಆಗಸ್ಟ್/ 2025


ಅಪ್ರಾಪ್ತ ಬಾಲಕಿಗೆ ಅಂಕಲ್ ಜೊತೆ ವಿವಾಹ ಸಿದ್ಧತೆ: ನೇರ ಠಾಣೆಗೆ ಬಂದು ಪೋಷಕರ ವಿರುದ್ಧ ದೂರು ನೀಡಿದ ಬಾಲಕಿ

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪೋಷಕರು ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಇದನ್ನು ತಪ್ಪಿಸಿ ನನಗೆ ರಕ್ಷಣೆ ಕೊಡಿ ಎಂದು ತಾನೇ ಖುದ್ದಾಗಿ ಪೊಲೀಸ್ ಸ್ಟೇಷನ್‌ಗೆ ಬಂದು ದೂರು ನೀಡಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡದಿದೆ.
ಹೆಂಡತಿ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ಹೊರಟಿದ್ದ ಪೋಷಕರಿಂದ ಬಾಲಕಿಯನ್ನು ರಕ್ಷಿಸಲಾಗಿದೆ.
”ನನಗೆ ವಯಸ್ಸಿನ್ನು ಹದಿನಾರು. 8 ನೇ ತರಗತಿಯಲ್ಲಿ ಓದುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಶಾಲೆಗೆ ಆಗಮಿಸಿ ಬಾಲ್ಯ ವಿವಾಹದಲ್ಲಿ ಅನುಭವಿಸಬೇಕಾದ ತೊಂದರೆ. ಮಾನಸಿಕ, ದೈಹಿಕ ಅಸಮಾತೋಲನದಿಂದ ಆಗುವ ಅನಾನುಕೂಲ, ಮುಂಬರುವ ದಿನಗಳಲ್ಲಿ ಬಂದೊದಗಬಹುದಾದ ಎಡವಟ್ಟು ಬಗ್ಗೆ ಜಾಗೃತಿ ಮೂಡಿಸಿದ್ದರು. ಅಂದು ಶಾಲೆಯಲ್ಲಿ ಕೇಳಿದ್ದ ಪೊಲೀಸರ ಬುದ್ದಿ ಮಾತು ನೆನಪಾಗಿ ನೇರವಾಗಿ ಪೊಲೀಸ್ ಸ್ಟೇಷನ್ ಬಂದೆ ” ಎಂದು ಬಾಲಕಿಯು ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಸಮ್ಮುಖದಲ್ಲಿ ವಿವರಿಸಿದಳು.
”ನನ್ನ ಹೆಸರು ಅರ್ಚನ (ಹೆಸರು ಬದಲಾಯಿಸಲಾಗಿದೆ) ನಾನೀಗ ಶಾಲೆ ಬಿಟ್ಟು ಮನೆಯಲ್ಲಿದ್ದೇನೆ. ನಮ್ಮ ಅಪ್ಪ, ಅಮ್ಮ ಹಾಗೂ ಅಣ್ಣ ನನಗೆ ಮದುವೆ ಮಾಡಲು ಮುಂದಾಗಿದ್ದಾರೆ. ಇತ್ತೀಚಿಗೆ ಹೆಂಡತಿ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ಈ ಭಾನುವಾರದ ನಂತರ ಬರುವ ಭಾನುವಾರ ಮದುವೆ ಫಿಕ್ಸ್ ಮಾಡಿದ್ದಾರೆ. ನನಗೆ ಮದುವೆಯಾಗಲು ಈಗಲೇ ಇಷ್ಟವಿಲ್ಲ. ಆದರೂ ನನ್ನ ಪೋಷಕರು ಬಲವಂತ ಮಾಡುತ್ತಿದ್ದಾರೆ ” ಎಂದು ವಿವರಿಸಿದಳು.
ಪೋಷಕರನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸ್:
ಕೆಲ ಸಮಯದ ನಂತರ ಪೊಲೀಸ್ ಅಧಿಕಾರಿ ಹಾಗೂ ಸಿಡಿಪಿಒ ಜತೆಗೂಡಿ ಬಾಲ್ಯ ವಿವಾಹಕ್ಕೆ ಅಣಿಗೊಳಿಸುತ್ತಿದ್ದಾರೆ ಎನ್ನುವ ಆರೋಪಿ ತಂದೆ, ತಾಯಿ ಹಾಗೂ ಅಣ್ಣನನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ನಾವು ಮದುವೆ ನಡೆಸಲು ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ” ಎಂದು ಆರೋಪಿತರು ಹೇಳಲು ಮುಂದಾದರೂ, ತನಿಖೆ ನಡೆಸಿದಾಗ ತೀರ್ಮಾನಿಸಿದ್ದು ನಿಜವೆಂದು ಒಪ್ಪಿಕೊಂಡರು. ಪ್ರಸ್ತುತ ವಿವಾಹ ಇಚ್ಚಿಸದ ಹಾಗೂ ಅಪ್ರಾಪ್ತೆಯಾಗಿರುವ ಬಾಲಕಿ, ಈಕೆಯ ತಂದೆ, ತಾಯಿಯನ್ನು ಸಂಜೆ ಚಿತ್ರದುರ್ಗದ ಮಕ್ಕಳ ಕಲ್ಯಾಣ ಕೇಂದ್ರ(ಸಿಡಬ್ಲ್ಯೂಎಸ್)ದ ಬಾಲಕಿಯರ ಬಾಲ ಮಂದಿರಕ್ಕೆ ಕರೆದೊಯ್ಯಲಾಯಿತು.
ಅನ್ಯರಿಗೂ ಮಾದರಿ ಎಂದ ಡಿವೈಎಸ್‌ಪಿ:
ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳನ್ನು ಮರೆಮಾಚಿ ನಡೆಸಲು ಮುಂದಾಗುತ್ತಿರುವ ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಜನರಲ್ಲಿ ಇತ್ತೀಚಿಗೆ ಹೆಚ್ಚು ಜಾಗೃತಿ ಮೂಡುತ್ತಿದೆ. ಒಬ್ಬಳೇ ಪೊಲೀಸ್ ಸ್ಟೇಷನ್ಗೆ ಧೈರ್ಯವಾಗಿ ಆಗಮಿಸಿದ್ದು ನಿಜಕ್ಕೂ ನಮಗೆ ಹೆಮ್ಮೆ ತಂದಿದೆ. ಇದು ಅನ್ಯರಿಗೂ ಮಾದರಿಯಾಗಲಿದೆ ಎಂದು ಚಳ್ಳಕೆರೆ ಡಿವೈಎಸ್‌ಪಿ ಡಿ ರಾಜಣ್ಣ ಹೇಳಿದ್ದಾರೆ.
ಬಾಲಕಿಯ ದೂರಿನಲ್ಲಿ ಸತ್ಯ ಕಂಡಿರುವ ಹಿನ್ನೆಲೆಯಲ್ಲಿ ನಾವು ಅಪ್ರಾಪ್ತ ಬಾಲಕಿ, ಈಕೆಯ ತಂದೆ, ತಾಯಿಯನ್ನು ಚಿತ್ರದುರ್ಗದ ಸಿಡಬ್ಲ್ಯೂಎಸ್‌ಗೆ ಕರೆದೊಯ್ಯುತ್ತಿದ್ದೇವೆ. ಬಾಲಕಿಯನ್ನು ಬಾಲಮಂದಿರದಲ್ಲಿ ಬಿಡಲಾಗುವುದು ಎಂದು ಮೊಳಕಾಲ್ಮುರು ಸಿಡಿಪಿಒ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ.