


ಡೈಲಿ ವಾರ್ತೆ: 12/ಆಗಸ್ಟ್/ 2025


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನಾಗೇಂದ್ರ ಪುತ್ರನ್ ಅವರಿಗೆ ನೀಡಿ: ಕಾಂಗ್ರೆಸ್ ಕಾರ್ಯಕರ್ತ ಜಗನಾಥ್ ಅಮೀನ್

ಕೋಟ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮುದಾಯದ ವ್ಯಕ್ತಿ ಹಾಗೂ ಸಾಮಾಜಿಕ ಹೋರಾಟಗಾರ, ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರಿಗೆ ನೀಡಬೇಕೆಂದು ಸಾಲಿಗ್ರಾಮ ಮೊಗವೀರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಹಿರಿಯ ಕಾರ್ಯಕರ್ತರಾದ ಜಗನ್ನಾಥ್ ಅಮೀನ್ ಆಗ್ರಹಿಸಿದ್ದಾರೆ.
ಅವರು ಆ.12 ರಂದು ಮಂಗಳವಾರ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಜಾತಿಬೇಧ ಮರೆತು ಕಾಂಗ್ರೆಸ್ ಕಾರ್ಯಕರ್ತರ ಬೆನ್ನೆಲುಬಾಗಿ ಹಾಗೂ ಜನರ ಪರವಾಗಿ ನಿಲ್ಲುವವರು. ಅಲ್ಲದೆ ಪಕ್ಷದ ಪರವಾಗಿ ಧ್ವನಿ ಎತ್ತಿ ವಿರುದ್ಧ ಪಕ್ಷದವರಿಗೆ ಮಾತಿನಲ್ಲೇ ಚಾಟಿ ಬೀಸಿದವರು ನಾಗೇಂದ್ರ ಪುತ್ರನ್ ಅವರು.
ಈಗಾಗಲೇ ಪಕ್ಷ ಪರವಾಗಿ ಹಾಗೂ ಜನರ ಪರವಾಗಿ ಸಾಕಷ್ಟು ಹೋರಾಟಗಳ ಮುಂಚೂಣಿಯಲ್ಲಿ ಇದ್ದವರು. ಇಂತಹ ನಾಯಕತ್ವದ ಗುಣಕ್ಕೆ ಕಾಂಗ್ರೆಸ್ ಸರ್ಕಾರ ಉತ್ತಮ ಸ್ಥಾನ ನೀಡಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರಾವಳಿ ಭಾಗದಲ್ಲಿ ಅತ್ಯಂತ ಶಕ್ತಿ ಬರಲಿದೆ.
ಅಲ್ಲದೆ ಕರಾವಳಿ ಭಾಗದಲ್ಲಿ ಉದ್ದಗಲಕ್ಕೂ ಮೊಗವೀರ ಸಮಾಜ ಇರುವುದರಿಂದ ನಮ್ಮ ಯುವ ನಾಯಕ ನಾಗೇಂದ್ರ ಪುತ್ರನ್ ಅವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಗೋಪಾಲ್ ಜಿ. ಕೋಟ, ಸತೀಶ್ ಆಚಾರ್ಯ ಹರ್ತಟ್ಟು, ಕಿಶೋರ್ ಶೆಟ್ಟಿ ಚಿತ್ರಪಾಡಿ ಉಪಸ್ಥಿತರಿದ್ದರು.