


ಡೈಲಿ ವಾರ್ತೆ: 18/ಆಗಸ್ಟ್/ 2025


ರಾ.ಹೆ ರಸ್ತೆಯಲ್ಲಿ ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಳ್ಳಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಗುರುತಿಸಲಾದ ಅಪಘಾತವಾಗುವ ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ಅಗತ್ಯವಿರುವ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳುವ ಮೂಲಕ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಬಹುತೇಕ ಕಾಮಗಾರಿಗಳಲ್ಲಿ ದಾರಿದೀಪ ಅಳವಡಿಕೆ, ರೋಡ್ ಮಾರ್ಕಿಂಗ್, ಪಾದಚಾರಿ ಕ್ರಾಸಿಂಗ್, ಝೀಬ್ರಾ ಕ್ರಾಸಿಂಗ್, ಸೂಚನಾ ಫಲಕ, ಹೈಮಾಸ್ಟ್ ದ್ವೀಪ ಬ್ಲಿಂರ‍್ಸ್ ಸೇರಿದಂತೆ ಮತ್ತಿತರ ಸುರಕ್ಷತಾ ವಿಧಾನಗಳನ್ನು ಅಳವಡಿಸದೇ ಇರುವುದು ಕಂಡುಬಂದಿದೆ. ಇದರಿಂದ ರಸ್ತೆ ಅಪಘಾತದಲ್ಲಿ ಸಾವು-ನೋವುಗಳ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆ, ಶಾಶ್ವತ ಕಾಮಗಾರಿ ಕೈಗೊಳ್ಳುವವರೆಗೆ ತಾತ್ಕಾಲಿಕ ಸುರಕ್ಷತಾ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಸಾರ್ವಜನಿಕರು ವಾಹನದಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು. ಸಾರಿಗೆ ಪ್ರಾಧಿಕಾರ ಸೂಚಿಸಿರುವ ವೇಗಮಿತಿಯಲ್ಲಿ ಸಂಚರಿಸುವುದರೊಂದಿಗೆ ಯಾವುದೇ ಅವಘಡಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಉಡುಪಿ ನಗರ ವ್ಯಾಪ್ತಿಯಲ್ಲಿ 58 ಕ್ಕೂ ಹೆಚ್ಚು ವಿವಿಧ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದರಿಂದ, ಕಟ್ಟಡಗಳ ಮುಂಭಾಗ ರಸ್ತೆಯ ಮೇಲೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವ ಹಿನ್ನೆಲೆ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಪಾರ್ಕಿಂಗ್ ನಿಯಮಗಳನ್ನು ಪಾಲಿಸದೇ ಇರುವ ಕಟ್ಟಡ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ, ನಿಯಮಾನುಸಾರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. .
ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಬೇಕು. ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ರಸ್ತೆಯ ಮಧ್ಯದಲ್ಲಿ ಜಾಹೀರಾತುಗಳನ್ನು ಅಳವಡಿಸಲು ಉಪಯೋಗಿಸಿರುವ ಕಂಬಗಳ ತೆರವು ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವಂತಹ ಫಾಸ್ಟ್ ಫುಡ್ ಸೆಂಟರ್, ತಳ್ಳುವ ಗಾಡಿಗಳು ಹಾಗೂ ಗೂಡಂಗಡಿಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಲವು ಬಸ್‌ಗಳು ಬಸ್ ನಿಲ್ದಾಣವನ್ನು ಹೊರತುಪಡಿಸಿ, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳ ಮುಂಭಾಗದಲ್ಲಿ ಬಸ್‌ಗಳ ಸ್ಟಾಪ್ ನೀಡುತ್ತಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಶಾಲೆ ಹಾಗೂ ಆಸ್ಪತ್ರೆಗಳ ಬಳಿ ಬಸ್ ನಿಲ್ಲದೇ ಸೂಕ್ತ ನಿಲ್ದಾಣಗಳನ್ನು ಬಸ್‌ಗಳು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಟೋ ರಿಕ್ಷಾ ತಂಗುದಾಣಗಳಲ್ಲಿ ಎಲ್ಲಾ ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಲು ಅನುಮತಿ ನೀಡಬೇಕೆಂದು ಮನವಿಗಳನ್ನು ನೀಡಿದ್ದು, ಈ ಸಂಬಂಧ ಆರ್.ಟಿ.ಓ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಆಯುಕ್ತರು ನಿಲ್ದಾಣ ಸಾಮರ್ಥ್ಯದ ಆಧಾರ ಮೇಲೆ ಆಟೋರಿಕ್ಷಾಗಳ ನಿಲುವಿಕೆಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಉಡುಪಿ ಅಂಬಲಪಾಡಿ ವಾರ್ಡಿನ ದೇವಸ್ಥಾನದ ಹಿಂಬದಿಯ ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ರಸ್ತೆ ಕೂಡುವಲ್ಲಿ ಹಾಗೂ ಹೊಸದಾಗಿ ಡಾಂಬರೀಕರಣ ಮಾಡುವ ಸಮಯದಲ್ಲಿ ತೆರವುಗೊಳಿಸಲಾದ ಹಂಪ್ಸ್ಗಳನ್ನು ಪುನರ್ ನಿರ್ಮಿಸುವಂತೆ ಅಭಿಯಂತರರುಗಳಿಗೆ ತಿಳಿಸಿದರು.
ಹೆಬ್ರಿ ತಾಲೂಕಿನ ಪಂಚಾಯತ್ ವ್ಯಾಪ್ತಿಯ ರಿಕ್ಷಾ ನಿಲ್ದಾಣವನ್ನು ಖಾಯಂ ನಿಲ್ದಾಣವಾಗಿ ಮಾಡುವ ಬಗ್ಗೆ ಮನವಿ ಬಂದಿದ್ದು, ಲೋಕೋಪಯೋಗಿ ಹಾಗೂ ಆರ್.ಟಿ.ಓ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅವಶ್ಯವಿದ್ದಲ್ಲಿ ಮಾತ್ರ ಖಾಯಂ ನಿಲ್ದಾಣ ಮಾಡಲು ಅನುಮತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ,ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀಡಿಯನ್ ಓಪನ್‌ಗಳನ್ನು ಮಾಡುವಾಗ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ, ನಿಯಮಾನುಸಾರ ವಾಹನ ದಟ್ಟಣೆ ಆಗದೇ ಇರುವಂತಹ ಸ್ಥಳಗಳನ್ನು ಗುರುತಿಸಿ, ಮಾಡಬೇಕೆಂದ ಅವರು, ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಡಿ.ಎಫ್.ಓ ಗಣಪತಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ್ ನಾಯಕ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.