


ಡೈಲಿ ವಾರ್ತೆ: 25/ಆಗಸ್ಟ್/ 2025


ಧರ್ಮಸ್ಥಳ “ಬುರುಡೆ’ ಪ್ರಕರಣಕ್ಕೆ ರೋಚಕ ತಿರುವು: ದೂರುದಾರ ತಂದಿದ್ದ ತಲೆಬುರುಡೆಯೇ ನಕಲಿ, ಮೆಡಿಕಲ್ ರಿಸರ್ಚ್ ಸೆಂಟರಿನಿಂದ ತಂದಿದ್ದ ತಂಡ.!

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ, ಅವುಗಳಲ್ಲಿ ಒಂದು ಶವದ ತಲೆ ಬುರುಡೆ ಸಿಕ್ಕಿದೆ’ ಅದನ್ನು ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದ ದೂರುದಾರ ವ್ಯಕ್ತಿಯ ಬುರುಡೆಯೇ ಸುಳ್ಳು ಎಂಬುದು ಎಸ್ಐಟಿ ಅಧಿಕಾರಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ಮೂಲಕ ಇಡೀ ಪ್ರಕರಣ ಮತ್ತೆ ತಿರುವು ಪಡೆದಿದ್ದು ಅದೇ ಕಾರಣಕ್ಕೆ ದೂರುದಾರನನ್ನು ಬಂಧಿಸಲಾಗಿದೆ.
ಸಾಕ್ಷಿದಾರನಾಗಿ ನಟಿಸಿದ್ದ ಮಂಡ್ಯ ಜಿಲ್ಲೆಯ ಮೂಲದ ಚಿನ್ನಯ್ಯ ಎಂಬ ದೂರುದಾರನ ಕೈಗೆ ಬೇರೆಯದ್ದೇ ತಂಡವೊಂದು ಈ ಬುರುಡೆಯನ್ನು ತಲುಪಿಸಿತ್ತು ಮತ್ತು ಇದೇ ರೀತಿ ಕತೆ ಕಟ್ಟುವಂತೆ ಮಾಡಿತ್ತು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ.
ಆ ತಂಡ ನೀಡಿದ್ದ ತಲೆ ಬುರುಡೆಯನ್ನು ಮೆಡಿಕಲ್ ಸೆಂಟರ್ ಒಂದರಿಂದ ತರಲಾಗಿತ್ತು. ಅಲ್ಲದೆ ಅದು 40 ವರ್ಷ ಹಳೆಯದ್ದು ಎಂಬ ವಿಚಾರವೂ ಎಫ್‌ಎಸ್‌ಎಲ್ ತಜ್ಞರ ಪರಿಶೀಲನೆ ವೇಳೆ ಗೊತ್ತಾಗಿದೆ.
ಜು.11ರಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಬುರುಡೆಯೇ ನಕಲಿ ಆಗಿರುವುದಲ್ಲದೆ, ದೂರಿಗೆ ಇನ್ನಷ್ಟು ಒತ್ತು ಕೊಡುವುದಕ್ಕಾಗಿ ಈ ರೀತಿ ಮಾಡಲಾಗಿತ್ತು ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ. ವಿಶೇಷ ಅಂದರೆ, ಈ ತಲೆ ಬುರುಡೆಯನ್ನು ಬಹುಕಾಲ ಬಾಳಿಕೆ ಬರುವಂತೆ ಮೆಡಿಕಲ್ ಸೆಂಟರ್‌ನಲ್ಲಿ ವಾರ್ನಿಶ್ ಪೈಂಟನ್ನು ಬಳಿದಿರುವುದು ಬೆಳಕಿಗೆ ಬಂದಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ, ಅವುಗಳಲ್ಲಿ ಒಂದು ಶವದ ತಲೆ ಬುರುಡೆ ಸಿಕ್ಕಿದೆ’ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು ಈಗ ಸುಳ್ಳಾಗಿದೆ. ದೂರುದಾರ ಚಿನ್ನಯ್ಯ ತನ್ನ ವಕೀಲರ ಜೊತೆಗೆ ಬಂದು ಧರ್ಮಸ್ಥಳ ಠಾಣೆ ಹಾಗು ಮಂಗಳೂರು ಎಸ್ಪಿಗೆ ನೀಡಿದ್ದ ದೂರು ಪ್ರಕರಣವನ್ನು ದೇಶ- ವಿದೇಶದಲ್ಲಿ ಸುದ್ದಿಯಾಗುವಂತೆ ಮಾಡಿತ್ತು. ಆನಂತರ, ಕೇರಳದ ಮಾಧ್ಯಮಗಳು ಹಾಗೂ ರಾಷ್ಟ್ರೀಯ ವಾಹಿನಿಗಳ ಸುದ್ದಿಗಳು ಕರ್ನಾಟಕ ಸರ್ಕಾರಕ್ಕು ಒತ್ತಡ ಸೃಷ್ಟಿಸಿತ್ತು. ಬಳಿಕ ಎಸ್‌ಐಟಿ ರಚಿಸಿದ್ದಲ್ಲದೆ, ಅಸಹಜ ಸಾವುಗಳ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿತ್ತು. ಇದರಂತೆ ಅಧಿಕಾರಿಗಳ ತಂಡವು ಧರ್ಮಸ್ಥಳದ 17 ಕಡೆ ಶೋಧ ಕಾರ್ಯ ನಡೆಸಿತ್ತು.
ದೂರುದಾರ ಚಿನ್ನಯ್ಯನಿಗೆ ಹೋರಾಟ ತಂಡದ ಸದಸ್ಯರು ತಂದುಕೊಟ್ಟ ಈ ತಲೆಬುರುಡೆ ಬೇರೆ ಬೇರೆ ಕಡೆ ಹೋಗಿ ಬಂದಿರುವ ಇತಿಹಾಸ ಹೊಂದಿದೆ ಎನ್ನುವ ವಿಚಾರವೂ ತಿಳಿದುಬಂದಿದೆ. ಬುರುಡೆಯನ್ನು ತೋರಿಸಿ ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ಷಡ್ಯಂತ್ರ ರೂಪಿಸುವುದಕ್ಕಾಗಿ ದೂರುದಾರ ಚಿನ್ನಯ್ಯನ ಸಹಿತ ದೆಹಲಿಗೆ ಕರೆದೊಯ್ಯಲಾಗಿತ್ತು ಎಂಬ ಮಾಹಿತಿಯೂ ಇದೆ. ದೆಹಲಿಯಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಬುರುಡೆಯನ್ನು ತೋರಿಸಿ, ಇಡೀ ಪ್ರಕರಣಕ್ಕೆ ದೊಡ್ಡ ತಿರುವು ಸಿಗುವಂತೆ ಮಾಡಲಾಗಿತ್ತು ಎಂಬ ಮಾಹಿತಿ ಎಸ್‌ಐಟಿ ತನಿಖೆಯಲ್ಲಿ ಬಂದಿದೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ಭಾನುವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಈ ಸಂದರ್ಭದಲ್ಲಿ ಈತನಿಗ ಆಶ್ರಯ ಕೊಟ್ಟವರಿಂದ ಹಿಡಿದು ಷಡ್ಯಂತ್ರ ರೂಪಿಸಿರುವವರು ಯಾರೆಲ್ಲ ಇದ್ದಾರೆ ಎನ್ನುವುದು ಸೇರಿದಂತೆ ಹಲವರ ಹೆಸರನ್ನು ಬಾಯಿಬಿಟ್ಟಿದ್ದಾನೆ. ಅವರೆಲ್ಲರಿಗೂ ಎಸ್‌ಐಟಿ ಕಡೆಯಿಂದ ನೋಟಿಸ್ ನೀಡಿ ತನಿಖೆಗೆ ಕರೆಸಲಾಗುತ್ತದೆ ಎನ್ನಲಾಗಿದೆ. ಎಸ್‌ಐಟಿ ತನಿಖೆಯಿಂದ ದಿಕ್ಕೆಟ್ಟಿರುವ ಚಿನ್ನಯ್ಯ ಪ್ಲಾನ್ ಎಲ್ಲ ಕೈಕೊಟ್ಟಿದ್ದರಿಂದ ಚಿಂತೆಗೆ ಬಿದ್ದಿದ್ದಾನೆ. ಹೀಗಾಗಿ ಹೊರಗೆ ಬಂದರೆ ತನ್ನ ಪ್ರಾಣಕ್ಕೆ ಸಂಚಕಾರ ಬರಬಹುದೆಂಬ ಆತಂಕದಲ್ಲಿದ್ದಾನೆ. ಇದರಿಂದಾಗಿ ತನ್ನನ್ನು ಜೈಲಿಗೆ ಕಳುಹಿಸಿ, ಇಲ್ಲವಾದಲ್ಲಿ ತನ್ನ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಮುಂದೆ ಅಂಗಲಾಚಿದ್ದಾನೆ ವಿಚಾರವೂ ತಿಳಿದುಬಂದಿದೆ.