


ಡೈಲಿ ವಾರ್ತೆ: 26/ಆಗಸ್ಟ್/ 2025


ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜದಲ್ಲಿ “ಸ್ವಾತಂತ್ರ್ಯ ಸೌಹಾರ್ದ ಸಂಗಮ.”ಕಾರ್ಯಕ್ರಮ

ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಸ್ವಾತಂತ್ರ್ಯ ಸೌಹಾರ್ದ ಸಂಗಮ” ಕಾರ್ಯಕ್ರಮ ಸಂಘದ ಕಛೇರಿಯಲ್ಲಿ ಭಾನುವಾರ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್ ಕುಂಞಿ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಎಂಜೆ ಪುತ್ತೂರು ಝೋನ್ ನ ಕೋಶಾಧಿಕಾರಿ ಅಬ್ದುಲ್ ಜಲೀಲ್ ಸಖಾಫಿ “ನಾವು ಸೌಹಾರ್ದಯುತವಾಗಿ, ಎಲ್ಲಾ ಭೇದಭಾವಗಳ ಮರೆತು ಒಂದಾಗಿ ಬಾಳೋಣ”ಎಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ, ಅಂಕಣಕಾರ, ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, “ನನ್ನ ಊರು ನಮ್ಮವರು ಎಂಬ ಭಾವದೊಂದಿಗೆ, ಇಂದು ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ, ದೇಶ ವಿದೇಶಗಳಲ್ಲಿ ನಮ್ಮ ದೇಶದ ಹಿರಿಮೆಯನ್ನು ಸಾರುವ ಹಿರಿಯ ವಿದ್ಯಾರ್ಥಿಗಳನ್ನು ಕೊಂಡಾಡಿ, ನಾವೆಲ್ಲರೂ ನಮ್ಮ ಹಿರಿಯರ ಆದರ್ಶದ ಬೆಳಕಲ್ಲಿ ಸೌಹಾರ್ದಯುತವಾಗಿ ಬೆಳಗಬೇಕು. ಈ ದೇಶದ ನೆಲದ ಸಂವಿಧಾನ ಕಾನೂನು ರಕ್ಷಕರಾಗಿ ಇಡೀ ಸಮಾಜಕ್ಕೆ ಸಮಾಜಕ್ಕೆ ಮಾದರಿಯಾಗೋಣ ಎಂದು ಕರೆ ನೀಡಿದರು.
ಕೆಎಂಜೆ ಈಸ್ಟ್ ಜಿಲ್ಲೆಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಮಾತನಾಡಿ, ಬ್ರಿಟೀಷರ ಒಡೆದು ಆಳುವ ನೀತಿ ನಮಗೆ ಆದರ್ಶವಲ್ಲ. ನಾವಿಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ಒಂದಾಗಿ ಬಾಳುತ್ತಿದ್ದೇವೆ. ಹಿಂದಿನವರ ಆದರ್ಶ ನಮಗೆ ದಾರಿದೀಪ. ಎಲ್ಲಾ ಭೇದಗಳ ಮರೆತು, ಭಾರತ ಮಾತೆಯ ಮಕ್ಕಳಾದ ನಾವು ಸೌಹಾರ್ದಯುತವಾಗಿ ಬಾಳಿ ಸುಸಂಸ್ಕೃತ ಸಮೃದ್ಧ ಭಾರತ ಕಟ್ಟೋಣ ಎಂದರು.
ಮಹಮ್ಮದ್ ಕುಕ್ಕುವಳ್ಳಿ ತನ್ನ ಬಾಲ್ಯದ ಶಿಕ್ಷಣ, ಗುರುಹಿರಿಯರ ಮಹತ್ವದ ಕುರಿತು ನೆನಪಿಸುತ್ತಾ ಸರ್ವ ಜನಾಂಗದ ಶಾಂತಿಯ ತೋಟದ ಸುಂದರ ಹೂವುಗಳಾಗಿ ಕಂಪು ಬೀರೋಣ ಎಂದರು.
ಕೆಎಂಜೆ ರೆಂಜ ಸರ್ಕಲ್ ನ ಸದಸ್ಯ ಅಬ್ಬಾಸ್ ಮದನಿ ದುಆ ನೆರವೇರಿಸಿದರು.ರೆಂಜ ಸರ್ಕಲ್ ಉಸ್ತುವಾರಿ ಹಂಝ ಲತೀಫಿ, ಕೋಶಾಧಿಕಾರಿ ಅಬ್ದುಲ್ ಮದನಿ, ಲೇಖಕ ಅಬ್ದುಲ್ ಅಝೀಝ್ ನೂರಾನಿ, ಸಂದರ್ಭೋಚಿತವಾಗಿ ಮಾತನಾಡಿದರು.
ಕೆ.ಎಂ.ಜೆ ಪ್ರಧಾನ ಕಾರ್ಯದರ್ಶಿ ಮೂಸ ಮದನಿ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಮದನಿ ವಂದಿಸಿದರು .