


ಡೈಲಿ ವಾರ್ತೆ: 28//ಆಗಸ್ಟ್/ 2025


ಫರಂಗಿಪೇಟೆ: ಗಣೇಶೋತ್ಸವದ ಬ್ಯಾನರ್ ಹರಿದ ಪ್ರಕರಣ – ಆರೋಪಿ ಪೊಲೀಸ್ ವಶಕ್ಕೆ

ಫರಂಗಿಪೇಟೆ: ಬ್ಯಾನರ್ ಅನ್ನು ಹರಿದು ಹಾಕಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಫರಂಗಿಪೇಟೆಯ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಹೈದರ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಫರಂಗಿಪೇಟೆಯ ನಿವಾಸಿ ಚಂದ್ರಶೇಖರ್ ಆಳ್ವ ಅವರು, ಸೇವಾಂಜಲಿ ಭವನದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಶುಭ ಕೋರುವ ಬ್ಯಾನರ್ ಅನ್ನು ಪೂರ್ವಾನುಮತಿ ಪಡೆದು ಕುಂಪಣಮಜಲು ಕ್ರಾಸ್ ಬಳಿ ಅಳವಡಿಸಿದ್ದರು. ಬುಧವಾರ ರಾತ್ರಿ ಈ ಬ್ಯಾನರ್ ಅನ್ನು ಹರಿದು ಹಾಕಿ, ₹3,500 ನಷ್ಟ ಮಾಡಿದ್ದಲ್ಲದೆ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ. ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಭೀತಿ ಉಂಟುಮಾಡಿದ ಕಾರಣಕ್ಕೆ ಹೈದರ್ ವಿರುದ್ಧ ಬಿಎನ್ ಎಸ್ ಕಾಯ್ದೆಯ ಕಲಂ 299, 191, 353 (1), 57, 324 (4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನನಿತ್ಯ ಮದ್ಯ ವ್ಯಸನಿಯಾಗಿರುವ ಹೈದರ್ ಬ್ಯಾನರ್ ಹರಿದ ಸಂದರ್ಭದಲ್ಲಿ ಪಾನಮತ್ತನಾಗಿದ್ದಾನೆಯೇ ಎಂಬುವುದನ್ನು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.