ಡೈಲಿ ವಾರ್ತೆ: 06/ಸೆ./2025

ಬಂಟ್ವಾಳ| ಕೃಷಿ ಜಮೀನಿಗೆ ಕೊಳವೆ ಬಾವಿ ನಿರ್ಮಿಸಿ ಕೊಡಲು ಲಂಚ – ಪಂಚಾಯತ್ ಅಧ್ಯಕ್ಷೆ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಬಂಟ್ವಾಳ: ಕೃಷಿ ಜಮೀನಿಗೆ ಕೊಳವೆ ಬಾವಿ ನಿರ್ಮಿಸಿ ಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಹಾಗೂ ಬಿಲ್ ಕಲೆಕ್ಟರ್ ವಿಲಯಂ ಅವರು ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಶನಿವಾರ ನಡೆದಿದೆ.

ದೂರುದಾರರ ಮಾವನಿಗೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ 1 ಎಕ್ರೆ ಕೃಷಿ ಜಮೀನು ಇದ್ದು, ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಯಡಿಯಲ್ಲಿ ತಮ್ಮ ಜಾಗಕ್ಕೂ ಒಂದು ಕೊಳವೆ ಬಾವಿಯನ್ನು ಮಾಡಿಕೊಡಲು 2024 ರಲ್ಲಿ ಪೆರುವಾಯಿ ಗ್ರಾ ಪಂ. ಅಭಿವೃದ್ಧಿ ಅಧಿಕಾರಿ ಅವರಿಗೆ ಅರ್ಜಿ ಸಲ್ಲಿಸಿದ್ದರು. 2024ನೇ ಸಾಲಿನಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸತಾಯಿಸಿ ಕೊನೆಗೆ ದೂರುದಾರರ ಮಾವನವರ ಹೆಸರನ್ನು ಕೊಳವೆ ಬಾವಿ ಲಿಸ್ಟಿನಲ್ಲಿ ಸೇರಿಸಿರುವುದಿಲ್ಲ. ಬಳಿಕ 2025ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರಕಾರ ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಕುರಿತು ತಿಳಿದು ದೂರುದಾರರ ಮಾವನವರು ಮತ್ತೆ 2025 ರ ಮೇ ತಿಂಗಳಲ್ಲಿ ಕೊಳವೆ ಬಾವಿಗೆ ಅರ್ಜಿ ಸಲ್ಲಿಸಿದ್ದಾರೆ.

ಬಳಿಕ ಈ ಬಗ್ಗೆ ದೂರುದಾರರ ಪತ್ನಿ ಪೆರುವಾಯಿ ಗ್ರಾಮ ಪಂಚಾಯತ್ ಕಛೇರಿಗೆ 2-3 ಬಾರಿ ಹೋಗಿ ವಿಚಾರಿಸಿದರೂ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಲಾಗಿರುವುದಿಲ್ಲ.

ದೂರುದಾರರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ದೂರುದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ ಕಚೇರಿಗೆ ಹೋಗಿ ವಿಚಾರಿಸುವಂತೆ ತಿಳಿಸಿದ್ದಾರೆ. ದೂರುದಾರರು ಸೆಪ್ಟೆಂಬರ್ 2ರಂದು ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಪಂಚಾಯತ್ ಅಧ್ಯಕ್ಷೆ ನೆಫಿಸಾ ಅವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ ‘ನಿಮಗೆ ಬೋರ್‍ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸಿಗೆ ಹತ್ತು ಸಾವಿರ ಕೊಡಲಿಕ್ಕಿದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್ ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುತ್ತಾರೆ. ಈ ಸಂದರ್ಭ ದೂರುದಾರರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಾಸು ಬಂದಿರುತ್ತಾರೆ.

ಬಳಿಕ ದೂರುದಾರು ಸೆ 4 ರಂದು ವಾಪಾಸ್ಸು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾ ಅವರಲ್ಲಿ ಬೋರ್ ವೆಲ್ ಹಾಕಿಸಿ ಕೊಡಲು ಕೇಳಿಕೊಂಡಾಗ ಅವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ಬೋರ್ ವೆಲ್ ಹಾಕಿಸಿ ಕೊಡಲು 10 ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಿಯಲ್ಲಿ ಪೆರುವಾಯಿ ಗ್ರಾ.ಪಂ. ಅಧ್ಯಕ್ಷೆ ನಫಿಸಾ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಶನಿವಾರ (ಸೆ 6) ಪಂಚಾಯತ್ ಅಧ್ಯಕ್ಷೆ ನಫೀಸಾ ಅವರು ಪಂಚಾಯತ್ ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ದೂರುದಾರರಿಂದ 10 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆದುಕೊಳ್ಳಲು ಸೂಚಿಸಿದಂತೆ ಅವರು 10 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಂಚಾಯತ್ ಅಧ್ಯಕ್ಷೆ ನಫಿಸಾ ಹಾಗೂ ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೆÇಲೀಸ್ ಠಾಣಾ ಡಿವೈಎಸ್ಪಿಗಳಾದ ಡಾ ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ ಎನ್, ರವಿ ಪವಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.