ಡೈಲಿ ವಾರ್ತೆ: 16/ಸೆ./2025

ಅಪ್ರಾಪ್ತ ವಿದ್ಯಾರ್ಥಿಗೆ ಪೊಲೀಸ್ ಪೇದೆಯಿಂದ ಹಲ್ಲೆ, ನಿಂದನೆ ಆರೋಪ: ಪೋಷಕರಿಂದ ದೂರು, ನ್ಯಾಯಕ್ಕಾಗಿ ಗೃಹ ಸಚಿವರಿಗೆ ಮೊರೆ

ಕುಂದಾಪುರ: ಶಾಲೆ ಬಿಟ್ಟು ಖಾಸಗಿ ಬಸ್ಸಿನಲ್ಲಿ ಮನೆಗೆ ಬರುತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಪೊಲೀಸ್ ಪೇದೆಯೋರ್ವ ಫುಟ್ ಬೋರ್ಡಿನಲ್ಲಿ ನಿಂತಿದ್ದಾನೆಂದು ಬಸ್ಸಿನಿಂದ ಕೆಳಗೆ ಇಳಿಸಿದಲ್ಲದೆ, ಸಾರ್ವಜನಿಕವಾಗಿ
ಅವ್ಯಾಚವಾಗಿ ನಿಂದಿಸಿ, ಹಲ್ಲೆ ಮಾಡಿದ ಆರೋಪದ ಬಾಲಕನ ಪೋಷಕರು ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಡ್ಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೆ. 9ರಂದು ಸಂಜೆ ಬಸ್ರೂರು ಹೈಸ್ಕೂಲಿನ ಹತ್ತನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಮತೀನ್ (15) ಶಾಲೆ ಬಿಟ್ಟು ಮನೆಗೆ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಬಸ್ಸಿನಲ್ಲಿ ಶಾಲೆ ಮಕ್ಕಳು ತುಂಬಿಕೊಂಡಿದ್ದು ಬಸ್ಸಿನ ಒಳಗೆ ಜಾಗ ಇಲ್ಲದೆ ಇರುವುದರಿಂದ ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತಿದ್ದನು.
ಬಿ.ಹೆಚ್. ಸರ್ಕಲ್ ನಲ್ಲಿ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದವರು ಬಸ್ಸನ್ನು ನೋಡಿ ನಿಲ್ಲಿಸಿ ಡೋರಿನಲ್ಲಿ ನಿಂತಿದ್ದ ಮಕ್ಕಳನ್ನು ಗಮನಿಸಿ ಡೊರಿನಲ್ಲಿ ನಿಲ್ಲಬಾರದೆಂದು ಗದರಿಸಿ ಒಳಗೆ ಹೋಗಲು ಹೇಳಿದ್ದಾರೆ.
ಆದರೆ ಕಿಶನ್ ಎನ್ನುವ ಪೊಲೀಸ್ ಪೇದೆಯೋರ್ವ ವಿದ್ಯಾರ್ಥಿ ಮಹಮ್ಮದ್ ಮತೀನ್ ನನ್ನು ನೋಡಿ ಉದ್ದೇಶಪೂರ್ವಕವಾಗಿ ಬಸ್ಸಿನಿಂದ ಕೆಳಗೆ ಇಳಿಸಿ ನಿನ್ನ ಅಪ್ಪ ದನ ಕಳ್ಳ ನೀನು ಕಳ್ಳನ ಮಗ ಅವ್ಯಾಚವಾಗಿ ಬೈದು ಲಾಟಿಯಿಂದ ಹೊಡೆದಿರುವುದಾಗಿ ಆರೋಪಿಸಲಾಗಿದೆ.

ಪೊಲೀಸ್ ಪೇದೆ ಕಿಶನ್ ವಿರುದ್ಧ ಮಹಮ್ಮದ್ ಮತೀನ್ ತಾಯಿ ರುಮಾ ಪರ್ವೀನ್ ಅವರು ತನ್ನ ಮಗನನ್ನು ಸಾರ್ವಜನಿಕ ಸ್ಥಳದಲ್ಲೇ ಉದ್ದೇಶಪೂರ್ವಕವಾಗಿ ನಿಂದಿಸಿದ ಬಗ್ಗೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಆದರೆ ಆ ದೂರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದರಿಂದ ಮಾನ್ಯ ಎಸ್ಪಿ ಹಾಗೂ ಐ ಜಿ ಅವರ ಗಮನಕ್ಕೂ ತರಲಾಗಿದೆ.
ಆದರೆ ಇಲ್ಲಿ ತನಕ ನಮ್ಮ ದೂರಿಗೆ ಅಧಿಕಾರಗಳಿಂದ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಪೋಷಕರು ಮಾಧ್ಯಮ ದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೆ ಮುಂದೆ ನ್ಯಾಯಕ್ಕಾಗಿ ಮಾನ್ಯ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.