ಡೈಲಿ ವಾರ್ತೆ: 18/ಸೆ./2025

ಧರ್ಮಸ್ಥಳ ಪ್ರಕರಣಕ್ಕೆ ರೋಚಕ ತಿರುವು: ಬಂಗ್ಲೆಗುಡ್ಡದಲ್ಲಿ 5 ಬುರುಡೆ, ಮೂಳೆಗಳು, ಎರಡು ಹಗ್ಗ, ಸೀರೆ ಪತ್ತೆ!

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ವಿಠಲ್ ಗೌಡ ಮಾಡಿದ್ದ ಆರೋಪ ಸಂಬಂಧ ಎಸ್ಐಟಿ ಶೋಧ ತೀವ್ರಗೊಂಡಿದ್ದು, ಹಲವು ವಸ್ತುಗಳು ಪತ್ತೆಯಾಗಿವೆ. ಶೋಧದ ವೇಳೆ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ. ಅಲ್ಲದೆ, ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣುಬಿಗಿದ ಅನುಮಾನ ಮೂಡಿಸಿದೆ.
ಮಹಜರು ಸಂದರ್ಭದಲ್ಲಿ ಪತ್ತೆಯಾದ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಸೀಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. SOCO ಮತ್ತು ಎಫ್‌ಎಸ್‌ಎಲ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿವೆ.

ಬಂಗ್ಲೆಗುಡ್ಡದಲ್ಲಿ ಬುಧವಾರ ಒಟ್ಟು ಐದು ಬುರುಡೆಗಳು ಮತ್ತು ಮೂಳೆಗಳು ಪತ್ತೆಯಾಗಿದ್ದು, ಎಸ್ಐಟಿ ಪಂಚರ ಸಮ್ಮುಖದಲ್ಲಿ ಮಹಜರು ಪೂರ್ಣಗೊಳಿಸಲಾಗಿತ್ತು. ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರ ಪತ್ತೆಯಾದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೀಲ್ ಮಾಡಲಾದ ಅಸ್ಥಿಪಂಜರ ಮತ್ತು ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲು ಎಸ್ಐಟಿ ತಯಾರಿ ನಡೆಸುತ್ತಿದೆ.