ಡೈಲಿ ವಾರ್ತೆ: 20/ಸೆ./2025

ಉಡುಪಿ: ಜುವೆಲ್ಲರಿ ವರ್ಕ್ ಶಾಪ್ ನಲ್ಲಿ ಕಳ್ಳತನ ಪ್ರಕರಣ – ಐವರು ಅಂತರಾಜ್ಯ ಕಳ್ಳರ ಬಂಧನ- ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ನಗದು ನಗದು ವಶ

ಉಡುಪಿ: ನಗರದ ಚಿತ್ತರಂಜನ್ ವೃತ್ತದಲ್ಲಿ ಚಿನ್ನ ಕರಗಿಸುವ ಅಂಗಡಿಯ ಶಟರ್ ನ ಬಾಗಿಲಿನ ಬೀಗವನ್ನು ನಕಲಿ ಕೀ ಬಳಸಿ 95 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಹಾಗೂ ನಗದು ಕಳವು ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಿದ್ದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಸೋಲಾಪುರದ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ, ನಿಲೇಶ ಬಾಪು ಕಸ್ತೂರಿ, ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್ ಶ್ರೀಮಂತ್(25) ಬಂಧಿತರು.

ಆರೋಪಿಗಳನ್ನು ಸೆ. 12 ರಂದು ಮಹಾರಾಷ್ಟ್ರ ಜಿಲ್ಲೆ ಸೋಲಾಪುರ ಜಿಲ್ಲೆ ಮಲ್‌ಶಿರೋಸ್ ತಾಲೂಕು, ನಿಮ್‌ಗಾಂವ್‌, ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 748.8 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ. 74,88,000, 4 ಕೆಜಿ 445 ಗ್ರಾಂ. ಬೆಳ್ಳಿ ಅಂದಾಜು ಮೌಲ್ಯ ರೂ. 3,60,000, ನಗದು 5,00,000 ರೂ. ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು ಅಂದಾಜು ಮೌಲ್ಯ 4,00,000 ಸಹಿತ ಒಟ್ಟು ರೂ. 87,48,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.