ಡೈಲಿ ವಾರ್ತೆ: 21/ಸೆ./2025

ಗ್ರಾಹಕರಿಗೆ ಗುಡ್ ನ್ಯೂಸ್: ಜಿಎಸ್​​ಟಿ ಕಡಿತ – ನಂದಿನಿ ಹಾಲಿನ ಉತ್ಪನ್ನಗಳ ದರ ಇಳಿಸಿದ ಕೆಎಂಎಫ್

ಬೆಂಗಳೂರು: ಕೇಂದ್ರ ಸರಕಾರ ಜಿ ಎಸ್ ಟಿ ದರ ಕಡಿತ ಮಾಡಿದ ಪರಿಣಾಮವಾಗಿ ಕರ್ನಾಟಕ ಹಾಲು ಮಹಾಮಂಡಳಿ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ದರವನ್ನು ಪರಿಷ್ಕರಣೆ ಮಾಡಿದೆ. ಹಾಲು, ಮೊಸರು ಹೊರತುಪಡಿಸಿ ಉಳಿದ ಉತ್ಪನ್ನಗಳ ಬೆಲೆಯನ್ನ ಇಳಿಕೆ ಮಾಡಲಾಗಿದೆ.

ಹೊಸ ಬೆಲೆ ಸೆಪ್ಟೆಂಬರ್ 22 ರಿಂದ ಜಾರಿಗೆ: ಕರ್ನಾಟಕ ಹಾಲು ಮಹಾಮಂಡಲ ತನ್ನ ಹೇಳಿಕೆಯಲ್ಲಿ ತನ್ನ ಎಲ್ಲ ಉತ್ಪನ್ನಗಳ ಪ್ಯಾಕ್‌ಗಳ ಬೆಲೆ ಪಟ್ಟಿಯಲ್ಲಿ ಪರಿಷ್ಕರಣೆ ಘೋಷಿಸಿದ್ದು, ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ತನ್ನ ಗ್ರಾಹಕರಿಗೆ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನ ನೀಡಲಾಗುತ್ತಿದೆ ಎಂದು ಪ್ರಕಟಿಸಿದೆ.

ಯಾವ ಯಾವ ಉತ್ಪನ್ನಗಳ ಬೆಲೆ ಕಡಿಮೆಯಾಗಿದೆ?: ದರ ಪರಿಷ್ಕರಣೆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿ ಜಿಎಸ್​​​​ಟಿ ದರ ಕಡಿತಕ್ಕೆ ಅನುಗುಣವಾಗಿ ನಂದಿನಿ ಹಾಲಿನ ಉತ್ಪನ್ನಗಳ ದರ ಕಡಿಮೆ ಮಾಡಲಾಗಿದೆ. ಹೊಸ ಪರಿಷ್ಕರಣೆ ದರವು ಸೋಮವಾರ ಸೆ.22 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಒಂದು 1000 ಮಿ.ಲಿ ತುಪ್ಪದ ( ಪೌಚ್ ) ದರವನ್ನು 650 ರೂಪಾಯಿಗಳಿಂದ 610ಕ್ಕೆ ಇಳಿಕೆ ಮಾಡಲಾಗಿದೆ. 305 ರೂಪಾಯಿ ಇದ್ದ 500 ಗ್ರಾಂ ಬೆಣ್ಣೆಯ ದರ ವನ್ನು 286ಕ್ಕೆ ಇಳಿಸಲಾಗಿದೆ. 425 ರೂಪಾಯಿ ಇದ್ದ ಒಂದು ಕೆ ಜಿ ಪನೀರ್ ದರವನ್ನು 408 ರೂಪಾಯಿಗೆ ಕಡಿತಗೊಳಿಸಲಾಗಿದೆ. ಅಂದರೆ 17 ರೂಪಾಯಿಯಷ್ಟು ದರ ಕಡಿಮೆ ಮಾಡಲಾಗಿದೆ.

ಕೆಎಂ ಎಫ್ ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ ಮಾಡಿರುವ ಪದಾರ್ಥಗಳ ವಿವರ ಮತ್ತು ಹಳೆಯ ದರ, ಹೊಸ ದರಗಳ ಮಾಹಿತಿ ಈ ಪಟ್ಟಿಯಲ್ಲಿದೆ.

ನೀರಿನ ಬಾಟಲ್​ ದರದಲ್ಲೂ 2 ರೂ ಇಳಿಕೆ: ಒಂದು ಲೀಟರ್ ನಂದಿನಿ ನೀರಿನ ಬೆಲೆಯನ್ನೂ ಇಳಿಸಲಾಗಿದ್ದು, ಒಂದು ಲೀಟರ್​​​​​ಗೆ 20 ರೂ. ಇದ್ದ ಬೆಲೆಯನ್ನ 18 ರೂ.ಗಳಿಗೆ ಕಡಿತ ಮಾಡಲಾಗಿದೆ. ಹಾಲು, ಮೊಸರು ಮತ್ತು ಮಜ್ಜಿಗೆಗೆ ಜಿ ಎಸ್ ಟಿ ವಿನಾಯತಿ ಇರುವುದರಿಂದ ಅವುಗಳ ಮಾರಾಟ ಬೆಲೆಯಲ್ಲಿ ಕೆಎಂಎಫ್ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸಕ್ತ ಇದ್ದ ದರವನ್ನೇ ಮುಂದುವರಿಸಿದೆ.

ತನ್ನ ಉತ್ಪನ್ನಗಳ ಬೆಲೆ ಇಳಿಕೆ ಮಾಡಿದ ಅಮುಲ್: ಅಮುಲ್ ಬ್ರಾಂಡ್ ಅಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್, ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ. ಹೀಗಾಗಿ ತುಪ್ಪ, ಬೆಣ್ಣೆ ಐಸ್ ಕ್ರೀಮ್, ಬೇಕರಿ ಮತ್ತು ಫ್ರೋಜನ್ ತಿಂಡಿಗಳು ಸೇರಿದಂತೆ 700 ಕ್ಕೂ ಹೆಚ್ಚು ಉತ್ಪನ್ನಗಳ ಪ್ಯಾಕ್‌ಗಳ ಚಿಲ್ಲರೆ ಬೆಲೆಯನ್ನು ಕಡಿತಗೊಳಿಸುವುದಾಗಿ ಶನಿವಾರ ಅಮೂಲ್​ ಘೋಷಿಸಿದೆ.

ಹೊಸ ಬೆಲೆ ಸೆಪ್ಟೆಂಬರ್ 22 ರಿಂದ ಜಾರಿಗೆ: ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ – ಜಿಸಿಎಂಎಂಎಫ್ ತನ್ನ ಹೇಳಿಕೆಯಲ್ಲಿ ತನ್ನ ಎಲ್ಲ ಉತ್ಪನ್ನಗಳ ಪ್ಯಾಕ್‌ಗಳ ಬೆಲೆ ಪಟ್ಟಿಯಲ್ಲಿ ಪರಿಷ್ಕರಣೆ ಘೋಷಿಸಿದ್ದು, ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವಂತೆ ತನ್ನ ಗ್ರಾಹಕರಿಗೆ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನ ನೀಡಲಾಗುತ್ತಿದೆ ಎಂದು ಪ್ರಕಟಿಸಿದೆ.

ಬೆಣ್ಣೆ, ತುಪ್ಪ, ಯುಎಚ್‌ಟಿ ಹಾಲು, ಐಸ್ ಕ್ರೀಮ್, ಚೀಸ್, ಪನೀರ್, ಚಾಕೊಲೇಟ್‌ಗಳು, ಬೇಕರಿ ಶ್ರೇಣಿ, ಫ್ರೋಜನ್ ಡೈರಿ ಮತ್ತು ಆಲೂಗಡ್ಡೆ ತಿಂಡಿಗಳು, ಮಂದಗೊಳಿಸಿದ ಹಾಲು, ಕಡಲೆಕಾಯಿ ಸ್ಪ್ರೆಡ್, ಮಾಲ್ಟ್ ಆಧಾರಿತ ಪಾನೀಯ ಇತ್ಯಾದಿ ಉತ್ಪನ್ನಗಳ ಬೆಲೆಯಲ್ಲಿ ಈ ಪರಿಷ್ಕರಣೆ ಆಗಲಿದೆ ಎಂದು ಜಿಸಿಎಂಎಂಎಫ್ ಹೇಳಿದೆ.