ಡೈಲಿ ವಾರ್ತೆ: 25/ಸೆ./2025

ದಿನಕರ ಶೆಟ್ಟಿಯವರ ಗೆಲುವನ್ನು ಎತ್ತಿ ಹಿಡಿದ ಹೈಕೋರ್ಟ್ – ಮತ ಎಣಿಕೆಯಲ್ಲಿ ಅಕ್ರಮ ನಡೆದಿಲ್ಲ ಎಂದ ನ್ಯಾಯಾಲಯ

ಕುಮಟಾ : 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 673 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ, ಶಾಸಕರಾಗಿದ್ದ ದಿನಕರ ಶೆಟ್ಟಿಯವರು ಕ್ಷೇತ್ರದ ಅಭಿವೃದ್ಧಿಗೆ ಮೂರನೇ ಬಾರಿಗೆ ಟೊಂಕ ಕಟ್ಟಿ ನಿಂತಿದ್ದರು.

ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ 59,966 ಮತಗಳನ್ನು ಪಡೆದು 673 ಮತಗಳಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ (59,293 ಮತ ) ವಿರುದ್ಧ ಗೆಲುವು ಸಾಧಿಸಿದರು.

ಆದರೆ ಚುನಾವಣಾ ಮತ ಎಣಿಕೆಯಲ್ಲಿಯಲ್ಲಿ ಅಕ್ರಮ ನಡೆದಿದೆ ಎಂಬುದಾಗಿ ಕೋರ್ಟ ಮೆಟ್ಟಿಲೇರಿದ್ದ ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕಾನೂನಿನ ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಶಾಸಕ ದಿನಕರ ಶೆಟ್ಟಿಯವರ ಗೆಲುವನ್ನು ಎತ್ತಿ ಹಿಡಿದಿದೆ. ಚುನಾವಣಾ ಮತ ಎಣಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದಾಗಿ ತೀರ್ಮಾನಿಸಿರುವ ಹೈಕೋರ್ಟ ಸೂರಜ್ ನಾಯ್ಕ ಸೋನಿಯವರು ದಾಖಲಿಸಿದ್ದ ಪ್ರಕರಣವನ್ನು ಖುಲಾಸೆಗೊಳಿಸಿದೆ.

ನ್ಯಾಯಾಲಯದ ಈ ತೀರ್ಮಾನದಿಂದ ಸೋನಿಯವರಿಗೆ ಹಿನ್ನಡೆಯಾಗಿದ್ದು, ಶಾಸಕ ದಿನಕರ ಶೆಟ್ಟಿಯವರು ಜನಾನುರಾಗಿ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 2023 ರ ಚುನಾವಣಾ ಮತ ಎಣಿಕೆ ನಂತರ ಇಲ್ಲ ಸಲ್ಲದ ಊಹಾಪೋಹಗಳನ್ನು ಕ್ಷೇತ್ರದಲ್ಲಿ ಹರಿಬಿಟ್ಟು, ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವ ಕಾರ್ಯವೂ ನಡೆದಿತ್ತಾದರೂ, ಇದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಂತಾಗಿದೆ.

ಶಾಸಕ ದಿನಕರ ಶೆಟ್ಟಿ ಎರಡು ಸಲ ಬಿಜೆಪಿಯಿಂದ, ಒಮ್ಮೆ ಜೆಡಿಎಸ್‌ನಿಂದ, ಒಟ್ಟೂ ಮೂರು ಬಾರಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಶಾಸಕರಾಗಿ ಗೆಲುವು ಸಾಧಿಸಿದವರಾಗಿದ್ದಾರೆ.

ಏನಿದು ಪ್ರಕರಣ :
2023 ರಲ್ಲಿ ಆರಂಭಿಕ ಹಂತದ ಮತ ಎಣಿಕೆಯಲ್ಲಿ ಜೆಡಿಎಸ್-ಬಿಜೆಪಿ ಸಮಬಲದ ಮುನ್ನಡೆ ಸಾಧಿಸುತ್ತಾ ನಡೆದು 14 ಹಾಗೂ 15ನೇ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್ ಕೊಂಚ ಮುನ್ನಡೆ ಕಂಡಿತ್ತು. ಜೆಡಿಎಸ್ ಕಾರ್ಯಕರ್ತರು ಇನ್ನೇನು ಸಂಭ್ರಮಾಚರಣೆಗೆ ತಯಾರಿ ನಡೆಸುತ್ತಿರುವಾಗ, ಎರಡು ಮತ ಯಂತ್ರಗಳ ತಾಂತ್ರಿಕ ತೊಂದರೆಯಿಂದಾಗಿ ವೋಟಿಂಗ್ ಸ್ಲಿಪ್ ಮರು ಎಣಿಕೆ ಮಾಡ ಬೇಕಿದೆ ಎಂಬ ಮಾಹಿತಿ ಬಂದಿದ್ದು, ಅದು ಕೊಂಚ ಸಮಯ ತೆಗೆದುಕೊಂಡಿದ್ದರಿಂದ ಫಲಿತಾಂಶ ಘೋಷಣೆ ವಿಳಂಬವಾಗಿತ್ತು.

ಇದನ್ನೇ ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಬಿಂಬಿಸಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕೋರ್ಟ ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಕರ್ನಾಟಕ ಉಚ್ಚನ್ಯಾಯಾಲಯ ಅವರ ಪ್ರಕರಣವನ್ನು ಖುಲಾಸೆಗೊಳಿಸಿದೆ. ಶಾಸಕ ದಿನಕರ ಶೆಟ್ಟಿಯವರಿಗೆ ಅದೃಷ್ಟ ಮತ್ತೊಮ್ಮೆ ಕೈಹಿಡಿದಿದೆ.
ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ದಿ. ಮೋಹನ ಶೆಟ್ಟಿ ವಿರುದ್ಧ ದಿನಕರ ಶೆಟ್ಟಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾಗ ಕೇವಲ 20 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಆ ಸಂದರ್ಭದಲ್ಲಿಯೂ ಮೋಹನ ಶೆಟ್ಟಿಯವರು ಕೋರ್ಟ ಮೆಟ್ಟಿಲೇರಿದ್ದರಾದರೂ ದಿನಕರ ಶೆಟ್ಟಿಯವರಿಗೆ ಗೆಲುವು ಲಭಿಸಿತ್ತು.

ಕೋರ್ಟಿನ ಈ ತೀರ್ಮಾನದಿಂದಾಗಿ, ಕಳೆದ ಎರಡುವರೆ ವರ್ಷಗಳಿಂದ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರ ಗೆಲುವಿಗೆ ಮತ್ತೊಮ್ಮೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಕ್ಷೇತ್ರದ ಜನರು ಸದಾ ನನ್ನ ಜೊತೆಗೆ ನಿಂತಿದ್ದಾರೆ. ಅವರ ಆಶೀರ್ವಾದ ಬಲದಿಂದಲೇ ನಾನು ಕ್ಷೇತ್ರದ ಶಾಸಕನಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದು. ಚುನಾವಣಾ ಮತ ಎಣಿಕೆಯಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೂ ಪ್ರತಿಸ್ಪರ್ಧಿಗಳು ಜನರ ಮನದಲ್ಲಿ ಗೊಂದಲ ಹುಟ್ಟಿಸಿದರು. ಆದರೆ ನ್ಯಾಯಾಲಯವೇ ಈಗ ತೀರ್ಮಾನ ಕೊಟ್ಟಿದೆ. ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ.
ಈ ಸುಸಂದರ್ಭದಲ್ಲಿ ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ವತಿಯಿಂದ ಶ್ರೀ ದಿನಕರ ಕೇಶವ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.