ಡೈಲಿ ವಾರ್ತೆ: 03/ಅ./2025

ಶಿವಮೊಗ್ಗ| ಜಾತಿಗಣತಿಗೆಂದು ಬಂದು ಮಹಿಳೆಯ ತಲೆಗೆ ರಾಡ್‌ನಿಂದ ಹೊಡೆದು ದರೋಡೆಗೆ ಯತ್ನಿಸಿದ ದಂಪತಿಗಳು

ಶಿವಮೊಗ್ಗ: ರಾಜ್ಯದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ದಂಪತಿ ಮಹಿಳೆಯ ತಲೆಗೆ ರಾಡ್‌ನಿಂದ ಹೊಡೆದ ಭಯಾನಕ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯ ಆಜಾದ್‌ ನಗರದಲ್ಲಿ ಎರಡನೇ ತಿರುವಿನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
ಆಜಾದ್ ನಗರ ನಿವಾಸಿ ಮಹಿಳೆ ದಿಲ್ ಶಾದ್ ಗಾಯಾಳು.
ಹಲ್ಲೆ ನಡೆಸಿದ ದಂಪತಿಯನ್ನು ತಸ್ಲಿಮಾ ಹಾಗೂ ಅಸ್ಲಾಂ ಎಂದು ಗುರುತಿಸಲಾಗಿದೆ.

ಜಾತಿಗಣತಿ ಸಮೀಕ್ಷೆಯ ಹೆಸರಿನಲ್ಲಿ ಬಂದಿದ್ದ ತಸ್ಲಿಮಾ ಹಾಗೂ ಅಸ್ಲಾಂ ದಂಪತಿ, ದಿಲ್ ಶಾದ್ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಸದ್ಯ ದಿಲ್ ಶಾದ್ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ದರೋಡೆಗೆ ಯತ್ನಿಸಿದ ಖತರ್ನಾಕ್ ದಂಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ವಿವ: ಜಾತಿಗಣತಿ ಹೆಸರಿನಲ್ಲಿ ಮನೆಗೆ ದಂಪತಿ ಆಗಮಿಸಿದ್ದಾರೆ. ಈ ವೇಳೆ ಮನೆಯಲ್ಲಿ ದಿಲ್ ಶಾದ್‌ ಒಬ್ಬರೇ ಇದ್ದು, ಮನೆ ಯಜಮಾನರ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಆಧಾರ್ ಕಾರ್ಡ್ ತೋರಿಸುವಂತೆ ದಿಲ್‌ ಶಾದ್‌ ಬಳಿ ದಂಪತಿ ಹೇಳಿದ್ದಾರೆ. ಹೀಗಾಗಿ ಕಾರ್ಡ್‌ ತರಲೆಂದು ಮಹಿಳೆ ಒಳಹೋಗುತ್ತಿದ್ದಂತೆಯೇ ದಂಪತಿಯು ಆಕೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ.

ದಿಲ್‌ ಶಾದ್‌ ತಲೆಗೆ ದಂಪತಿ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ. ಬಲವಾದ ಪೆಟ್ಟು ಬೀಳುತ್ತಿದ್ದಂತೆಯೇ ಕಿರುಚಾಡುತ್ತಾ ದಿಲ್‌ ಶಾದ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇತ್ತ ಮಹಿಳೆಯ ಕಿರುಚಾಟ ಕೇಳಿ ಅಕ್ಕ-ಪಕ್ಕದ ಮನೆಯವರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಕಂಗಾಲಾದ ತಸ್ಲಿಮಾ, ಅದೇ ಮನೆಯಲ್ಲಿ ಅಡಗಿ ಕುಳಿತಿದ್ದಾಳೆ. ಬಳಿಕ ಹುಡುಕಿದ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ದಿಲ್ ಶಾದ್‌ಳನ್ನು ಶಿವಮೊಗ್ಗ ನಗರದ ಸಹರಾ ಆಸ್ಪತ್ರೆಗೆ ದಾಖಲಿಸಲಾಯ್ತು. ಸದ್ಯ ಗಾಯಾಳು ದಿಲ್ ಶಾದ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಕೆಯ ತಲೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ತಸ್ಲಿಮಾ ತಂದ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಕೆಲವೊಂದಿಷ್ಟು ಮಾರಕಾಸ್ತ್ರಗಳು ಪತ್ತೆ ಆಗಿರೋದಾಗಿ ಸ್ಥಳೀಯರು ತಿಳಿಸಿದ್ದಾರೆ.

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.