



ಡೈಲಿ ವಾರ್ತೆ: 05/ಅ./2025

ಕುಂದಾಪುರ| ಕಾವ್ರಾಡಿಯ ಮಸೀದಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳಿಂದ ಬೆಂಕಿ, ಸಂಪೂರ್ಣ ಸುಟ್ಟುಕರಕಲು!

ಕುಂದಾಪುರ:ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಸ್ವಿಫ್ಟ್ ಕಾರಿಗೆ ದುಷ್ಕರ್ಮಿಗಳು ಬೆಂಕಿಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಸುಟ್ಟು ಭಸ್ಮವಾದ ಘಟನೆ ಕುಂದಾಪುರ ತಾಲೂಕಿನ ಕಾವ್ರಾಡಿಯಲ್ಲಿ ಶನಿವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ವಿವರ: ಕಾವ್ರಾಡಿ ಗ್ರಾಮದ ಶೇಖ್ ಮೊಹಮ್ಮದ್ ಗೌಸ್ ಮತ್ತು ಕುಟುಂಬದವರು ಅ.1 ರಂದು ಹೈದರಾಬಾದ್ ಪ್ರವಾಸಕ್ಕೆ ಹೋಗಿದ್ದರು.
ಅವರು ಪ್ರವಾಸಕ್ಕೆ ಹೋಗುವ 10 ದಿನಗಳ ಮೊದಲು 5 ಲಕ್ಷ ರೂಪಾಯಿ ಕೊಟ್ಟು ಸ್ವಿಫ್ಟ್ ಕಾರು ಖರೀದಿಸಿದ್ದರು.
ಆದರೆ ಆ ಕಾರನ್ನು ಅವರ ಮನೆಗೆ ತೆಗೆದುಕೊಂಡು ಹೋಗಲು ಇತ್ತೀಚೆಗೆ ದಾರಿಯ ಸಮಸ್ಯೆ ಇದ್ದುದರಿಂದ ಕಾರನ್ನು ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು.
ಅ.4 ರಂದು ಬೆಳಿಗ್ಗೆ ಸುಮಾರು 5 ಗಂಟೆ ಸಮಯಕ್ಕೆ ಮೊಹಮ್ಮದ್ ಗೌಸ್ ಅವರ ತಮ್ಮ ಶೇಕ್ ಅನ್ಸಾರ್ ಸಾಹೇಬ್ ನಮಾಜಿಗೆ ಎದ್ದು ಬರುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಶೇಖ್ ಮೊಹಮ್ಮದ್ ಗೌಸ್ ಮತ್ತು ಅವರ ಮನೆಯವರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶಕ್ಕೆ ರಾತ್ರಿ 1 ಗಂಟೆಯಿಂದ 3 ಗಂಟೆಯ ಮದ್ಯದಲ್ಲಿ ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಲಾಗಿದೆ.
ಅಲ್ಲದೆ ಇತ್ತೀಚೆಗೆ ದಾರಿಯ ಸಮಸ್ಯೆ ಉಂಟು ಮಾಡಿದ್ದ ಅಬ್ದುಲ್ ಅಜೀಜ್ ಮತ್ತು ಅವರ ಮಗ ಶೇಖ್ ಅಬ್ದುಲ್ ಫಯಾಜ್ ಅಥವಾ ಅಣ್ಣನ ಮಗಳು ನೇಹಾ ಬೇಗಂ ಎಂಬುವವಳೊಂದಿಗೆ ಹಣದ ವ್ಯವಹಾರದಲ್ಲಿ ತಕರಾರು ಮಾಡಿದ್ದ ಕಂಡ್ಲೂರು ಮುಸೀನ್ ಹಾಗೂ ಸದಾಕತ್ ಎಂಬವರ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2025 ಕಲಂ: 326 (f) BNS ರಂತೆ ಪ್ರಕರಣ ದಾಖಲಾಗಿರುತ್ತದೆ .