ಡೈಲಿ ವಾರ್ತೆ: 06/ಅ./2025

ಶಿವಮೊಗ್ಗ| ಮದುವೆ ವಿಚಾರದಲ್ಲಿ ಮನಸ್ತಾಪ, ಇಬ್ಬರಿಗೆ ಚಾಕು ಇರಿತ

ಶಿವಮೊಗ್ಗ: ಇಬ್ಬರು ಯುವಕರಿಗೆ ಮಾರಕಾಸ್ತ್ರದಿಂದ ಇರಿದ ಘಟನೆ ನಗರದ ಊರುಗಡೂರು ಬಡಾವಣೆಯಲ್ಲಿ ನಡೆದಿದೆ. ಇರಿತಕ್ಕೊಳಗಾದ ಯುವಕರನ್ನು ಶಬ್ಬೀರ್‌ ಮತ್ತು ಶಹಬಾಜ್‌ ಎಂದು ಗುರುತಿಸಲಾಗಿದೆ.
ಇಬ್ಬರು ಯುವಕರನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ವೈಯಕ್ತಿಕ ವಿಷಯಕ್ಕೆ ಘಟನೆ ಸಂಭವಿಸಿದೆ. ಇರಿತಕ್ಕೊಳಗಾದ ಶಬ್ಬೀರ್‌ನ ಸಹೋದರಿಯ ಗಂಡ ಫಾರ್ದಿನ್‌, ಆತನ ಸಹೋದರ ಮತ್ತು ಸ್ನೇಹಿತ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಮದುವೆ ವಿಷಯಕ್ಕೆ ಮನಸ್ತಾಪ:
ಶಬ್ಬೀರ್‌ನ ಸಹೋದರಿ ಮತ್ತು ಫಾರ್ದಿನ್‌ ಪ್ರೀತಿಸಿ ಕೆಲವು ವರ್ಷದ ಹಿಂದೆ ಮದುವೆಯಾಗಿದ್ದರು. ಇದಕ್ಕೆ ಕುಟುಂಬದವರ ವಿರೋಧವಿತ್ತು. ಇತ್ತೀಚೆಗೆ ಶಬ್ಬೀರ್‌ನ ಸಹೋದರಿ ಮತ್ತು ಫಾರ್ದಿನ್‌ ಪ್ರತ್ಯೇಕವಾಗಿದ್ದರು. ಇದೇ ವಿಚಾರವಾಗಿ ಫಾರ್ದಿನ್‌ಗೆ ಶಬ್ಬೀರ್‌ ಮತ್ತು ಶಹಬಾಜ್‌ ಬೆದರಿಸುತ್ತಿದ್ದರು. ಹಾಗಾಗಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.