



ಡೈಲಿ ವಾರ್ತೆ: 09/ಅ./2025

ಪೋಕ್ಸೋ ಪ್ರಕರಣ ಆರೋಪಿ ಕೋರ್ಟ್ ಕಟ್ಟಡದ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಕಟ್ಟಡದ ಮೇಲಿಂದ ಬಿದ್ದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಬ್ಯಾಂಕ್ ಬಳಿಯ ಸೆಷನ್ಸ್ ಕೋರ್ಟ್‌ನಲ್ಲಿ ಗುರುವಾರ ನಡೆದಿದೆ.
ಗೌತಮ್ ಆತ್ಮಹತ್ಯೆಗೆ ಶರಣಾದ ಪೋಕ್ಸೋ ಪ್ರಕರಣದ ಬಂಧಿತ ಆರೋಪಿ
ಇಂದು ಟ್ರಯಲ್ ಇದ್ದ ಕಾರಣ ಪರಪ್ಪನ ಅಗ್ರಹಾರದಿಂದ ಮೈಸೂರು ಬ್ಯಾಂಕ್ ಬಳಿಯ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಆರೋಪಿ ಗೌತಮ್ನನ್ನು ಕರೆತಂದಿದ್ದರು. ಆರೋಪಿ ನ್ಯಾಯಾಧೀಶರ ಮುಂದೆ ಹಾಜರಾಗುವ ಮುನ್ನ ಐದನೇ ಮಹಡಿಯ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಘಟನೆಯಿಂದ ಕೋರ್ಟ್ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಆತಂಕ ಹರಡಿದ್ದು, ಪೊಲೀಸರು ತನಿಖೆಗೆ ತೊಡಗಿದ್ದಾರೆ. ಸಿಟಿ ಸಿವಿಲ್ ಘಟನೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೋಕ್ಸೋ ಕೇಸ್ ಆರೋಪಿಯಾಗಿದ್ದ ಗೌತಮ್:
ಗೌತಮ್ ಆಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ತಿಂಗಳು ದಾಖಲಾದ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ದೂರು ದಾಖಲಾಗಿದ್ದು, ಗೌತಮ್ ವಿರುದ್ಧ ಸೆಕ್ಷನ್ 6 ಮತ್ತು 10 ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿತ್ತು. ಬಂಧನದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲ್ಪಟ್ಟ ಆತನನ್ನು ಇಂದು ಮೊದಲ ಟ್ರಯಲ್‌ಗೆ ಹಾಜರಾಗಲು ಪೊಲೀಸ್ ಜೀಪ್‌ನಲ್ಲಿ ಕೋರ್ಟ್‌ಗೆ ಕರೆತರಲಾಗಿತ್ತು, ಆದರೆ ಈ ವೇಳೆ ಕೈನಿಂದ ಕೋಳಗಳನ್ನು ತೆಗೆದ ಕೂಡಲೇ ಐದನೇ ಮಹಡಿಯಿಂದ ಹಾರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯಲ್ಲಿ ಆರೋಪಿ ಗೌತಮ್ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು.