ಡೈಲಿ ವಾರ್ತೆ: 09/ಅ./2025

ಸಾಲಿಗ್ರಾಮ| ಅನಧೀಕೃತ ಪ್ರಾಣಿ ಪಾರುಗಾಣಿಕ ಘಟಕದ ವಿರುದ್ಧ ದೂರು ದಾಖಲು: ಪೊಲೀಸರು, ಅಧಿಕಾರಿಗಳ
ಸಮ್ಮುಖದಲ್ಲೇ ಪ್ರಾಣಿ, ಪಕ್ಷಿಗಳ ಪಂಜರಗಳ ಮುಟ್ಟುಗೋಲು

ಕೋಟ: ಸಾಲಿಗ್ರಾಮದಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಪ್ರಾಣಿ ಪಾರುಗಾಣಿಕ ಘಟಕ ಅನಧೀಕೃತ ಎನ್ನುವುದಾಗಿ ದೂರು ದಾಖಲಾಗಿದ್ದು ಗುರುವಾರ ಪೊಲೀಸರು, ಅಧಿಕಾರಿಗಳ
ಸಮ್ಮುಖದಲ್ಲಿ ಪಂಜರಗಳನ್ನು ಮುಟ್ಟುಗೋಲು ಹಾಕಿ ಶಾಶ್ವತವಾಗಿ ತೆರವುಗೊಳಿಸುವ ಕಾರ‍್ಯ ಮಾಡಲಾಯಿತು.

ಇಲ್ಲಿನ ಸುಧೀಂದ್ರ ಐತಾಳರು ನಿರ್ವಹಿಸುತ್ತಿರುವ ಪ್ರಾಣಿಗಳ ಪಾರುಗಾಣಿಕ ಕೇಂದ್ರ ಅನಧೀಕೃತವಾಗಿದ್ದು ಯಾವುದೇ ಇಲಾಖೆಯ ಪರವಾನಿಗೆ ಅಥವಾ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನೊಂದಣಿ ಪಡೆದಿಲ್ಲ. ಇಲ್ಲಿನ ಪ್ರಾಣಿಗಳನ್ನು ಶೋಚನೀಯ ಸ್ಥಿತಿಯಲ್ಲಿ
ನಡೆಸಲಾಗುತ್ತಿದೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ನಿರ್ಬಧಿಂಸಬೇಕೆಂದು ಹಲವು ಬಾರಿ ಚರ್ಚೆ ನಡೆದಿತ್ತು.
ದಾಳಿ ನಡೆಸಿ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಬುಧವಾರ ಪಶುಪಾಲನೆ ಇಲಾಖೆಯವರು ಕೋಟ ಠಾಣೆಯಲ್ಲಿ ಮತ್ತೊಮ್ಮೆ ದೂರು ದಾಖಲಿಸಿದ್ದು
ಇದರನ್ವಯ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿ ಕಾರ‍್ಯಚರಣೆ ನಡೆಸಿ ಈ ಕ್ರಮಕೈಗೊಂಡಿದ್ದಾರೆ.

ಎರಡು ಬಾರಿ ದಾಳಿ :
ಈ ಹಿಂದೆ ಪೇಟಾ ಸಂಸ್ಥೆಯ ದೂರಿನ ಮೇರೆಗೆ ಉಡುಪಿ ಜಿಲ್ಲಾ ಪ್ರಾಣಿದಯಾ ಸಂಘ, ಸಾಲಿಗ್ರಾಮ ಪಟ್ಟಣ ಪಂಚಾಯತ್‌, ಪಶು ಸಂಗೋಪನಾ ಇಲಾಖೆ ಮತ್ತು ವಲಯ ಅರಣ್ಯಾಧಿಕಾರಿಗಳ ಸಮ್ಮುಖ ಫೆ.12 ಹಾಗೂ ಸೆ.19ರಂದು ಎರಡು ಬಾರಿ ಇಲ್ಲಿಗೆ ದಾಳಿ ನಡೆಸಿ ನಾಯಿ, ಬೆಕ್ಕು ಮೊದಲಾದ ಪ್ರಾಣಿಗಳನ್ನು ಫೇಟಾ ಸಂಸ್ಥೆಯ ಸಂರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಇದೀಗ ಶಾಶ್ವತ ತೆರವಿಗೆ ಕ್ರಮಕೈಗೊಳ್ಳಲಾಗಿದೆ.

ಕೋಟ ಠಾಣೆ ಉಪನಿರೀಕ್ಷ ಪ್ರವೀಣ್‌ ಕುಮಾರ್‌, ಕ್ರೈಂ ವಿಭಾಗದ ಸುಧಾ ಪ್ರಭು, ಪ.ಪಂ. ಮುಖ್ಯಾಧಿಕಾರಿ ಅಜೇಯ್‌ ಭಂಡಾರ್ಕರ್‌, ಪೇಟಾ ಸಂಸ್ಥೆಯ ಸಿಂಚನಾ, ಪಶುಪಾಲನ ಇಲಾಖೆಯ ಡಾ.ಸೂರಜ್‌ ಹಾಗೂ ಪ.ಪಂ. ಮತ್ತು ಪೊಲೀಸ್‌ ಸಿಬಂದಿಗಳು ಇದ್ದರು.

ಸಾಲಿಗ್ರಾಮ ಪ. ಪಂ. ಸಾಮಾನ್ಯಸಭೆಯಲ್ಲಿ ಚರ್ಚೆ:
ಕಾನೂನಾತ್ಮ ಅವಕಾಶ ಎನ್ನಲಾಗಿತ್ತು!
ಈ ಪ್ರಾಣಿ ಪಾರುಗಾಣಿಕ ಘಟಕದ ಮೇಲೆ ಕಾನೂನು ಕ್ರಮಕೈಗೊಂಡ ಕುರಿತು ಬುಧವಾರ ನಡೆದ ಸಾಲಿಗ್ರಾಮ ಪ.ಪಂ. ಸಾಮಾನ್ಯಸಭೆಯಲ್ಲಿ ಸಾಕಷ್ಟುಚರ್ಚೆ ನಡೆದಿತ್ತು. ಬ್ರಹ್ಮಾವರ
ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಹಾವು, ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಅಪಘಾತವಾಗಿ ಗಾಯಗಳಾದ ಸಂದರ್ಭದಲ್ಲಿ ಸುಧೀಂದ್ರ ಐತಾಳರು ನೆರವಿಗೆ ಧಾವಿಸುತ್ತಾರೆ ಹಾಗೂ ಹಲವು ಬಾರಿ ಸಾಯುವ ಹಂತದಲ್ಲಿದ್ದ ನಾಯಿ, ಬೆಕ್ಕುಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಹೀಗಾಗಿ ಮಾನವೀಯ ನೆಲೆಯಲಿ, ಸ್ವಚ್ಚತೆ,
ಕಾನೂನಾತ್ಮಕವಾಗಿ ನಡೆಸುವುದಾದರೆ ಅವಕಾಶ ನೀಡಬೇಕು ಎನ್ನುವುದಾಗಿ ಹಲವು ಸದಸ್ಯರು
ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಿರ್ಣಯ ದಾಖಲಿಸಲಾಗಿತ್ತು. ಇದೀಗ ಇಲಾಖೆಯ
ಆದೇಶದ ಮೇರೆಗೆ ಸಂಪೂರ್ಣವಾಗಿ ತೆರವು ಕಾರ‍್ಯ ನಡೆದಿದೆ.