



ಡೈಲಿ ವಾರ್ತೆ: 17/ಅ./2025

ಬೆಂಗಳೂರು| ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ – ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ 36 ಮಂದಿ ಪ್ರಯಾಣಿಕರು ಪಾರು!

ಬೆಂಗಳೂರು: ನಗರದಿಂದ ಹೊರಟಿದ್ದ ಖಾಸಗಿ ಬಸ್‌ವೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಅನಂತಪುರ ಜಿಲ್ಲೆಗೆ 15 ಕಿಮೀ ದೂರದಲ್ಲಿರುವ ಗರ‍್ಲದಿನ್ನೆಯಲ್ಲಿ ಸಂಭವಿಸಿದೆ.
ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ಬಸ್ ಅನಂತಪುರದ ಬಳಿ ಚಲಿಸುತ್ತಿದ್ದಾಗ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಪಾರಾಗಿದ್ದಾರೆ.
ಗ್ರೀನ್ ಲೈನ್ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೊರಟಿತ್ತು. ಈ ವೇಳೆ ಟಯರ್ ಬ್ಲಾಸ್ಟ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನೂ ಬಿಟ್ಟು ಬಸ್‌ನಿಂದ ಜಿಗಿದಿದ್ದಾರೆ. ಹೀಗಾಗಿ ಪ್ರಯಾಣಿರ ಸಂಪೂರ್ಣ ಲಗೇಜ್‌ಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮವಾಗಿದೆ.
ದೀಪಾವಳಿ ಹಬ್ಬಕ್ಕೆ ಹೊರಟಿದ್ದಾಗಲೇ ದುರಂತ
ಬಸ್‌ನಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಇತರ ಪ್ರಯಾಣಿಕರೂ ಇದ್ದರು. ಸಾಲು ಸಾಲು ರಜೆ ಇದ್ದ ಕಾರಣ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದರು. ಟಯರ್ ಬ್ಲಾಸ್ಟ್ ಆಗಿ ತಡರಾತ್ರಿ 2:30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ.
ಆದ್ರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಮಹಿಳೆಯ ಸಮಯಪ್ರಜ್ಞೆ ಉಳಿಸಿತು 36 ಜೀವ:
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಇದೇ ವೇಳೆ ನಿದ್ರೆ ಮಂಪರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಎಚ್ಚರವಾಗಿದೆ. ಕೂಡಲೇ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಿರುಚಿದ್ದಾರೆ. ಆದಾಗ್ಯೂ ಡ್ರೈವರ್ ಅರ್ಧ ಕಿಮೀ ಬಸ್ ನಿಲ್ಲಿಸದೇ ಹೊರಟಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ಪ್ರಯಾಣಿಕರು ಸೇಫ್ ಆಗಿದ್ದರೂ, ಅವರ ಬಳಿಯಿದ್ದ ಮಹತ್ವದ ದಾಖಲೆಗಳು, ಹಬ್ಬಕ್ಕೆ ಕೊಂಡೊಯ್ಯುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಹೀಗಾಗಿ ಪ್ರಯಾಣಿಕರು ಗ್ರೀನ್‌ಲೈನ್ ಟ್ರಾವೆಲ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.