
ಡೈಲಿ ವಾರ್ತೆ: 27/ಅ./2025
ಕೋಟ| ಬೇಳೂರು ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ ಹಣದ ವಂಚನೆ – 12 ಮಂದಿ ವಿರುದ್ಧ ಪ್ರಕರಣ ದಾಖಲು

ಕೋಟ: ಬೇಳೂರು ಎಜುಕೇಶನ್ ಟ್ರಸ್ಟ್ ಎಂದು ಎರಡು ಸುಳ್ಳು ಟ್ರಸ್ಟ್ ಡೀಡುಗಳನ್ನು ನೋಂದಾಯಿಸಿಕೊಂಡು ಬೇಳೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಡೊನೇಷನ್ ರೂಪದಲ್ಲಿ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಅದಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಆಡಿಟ್ ಮಾಡದೆ ಹಣವನ್ನ ಪಡೆದು ವಂಚಿಸಿ ಗ್ರಾಮ ಪಂಚಾಯತ್ ಕಟ್ಟಡವನ್ನೇ ಟ್ರಸ್ಟಿನ ಕಚೇರಿಯೆಂದು ಟ್ರಸ್ಟ್ ಡೀಡ್ ನಲ್ಲಿ ನಮೂದಿಸಿ ಬೇಳೂರು ಪ್ರೌಢಶಾಲೆಯ ತರಗತಿಯ ಅವಧಿಯಲ್ಲಿ ಟ್ರಸ್ಟಿನ ಸಭೆಗಳನ್ನು ನಡೆಸಿ ಕರ್ನಾಟಕ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿರುತ್ತಾರೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿ ಶಾಲಾ ಬಸ್ಸನ್ನು ನಿಲ್ಲಿಸಿರುತ್ತಾರೆ ಅಲ್ಲದೆ ಪೆಟ್ರೋಲ್ ಬಂಕಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಬೇಳೂರು ಗ್ರಾಮದ ಬಿ. ಕರುಣಾಕರ ಶೆಟ್ಟಿ, ಬಿ .ಸತ್ಯನಾರಾಯಣ ಅಡಿಗ, ಸತೀಶ್ ಶೆಟ್ಟಿ ಮಡಿಯಾಣ, ವಿಜಯ್ ಕುಮಾರ್ ಶೆಟ್ಟಿ ಕೊಯಿಕೂರು, ಪ್ರಭಾವತಿ ಟಿ ಶೆಟ್ಟಿ, ಬಿ. ರಾಜೀವ ಶೆಟ್ಟಿ,
ಸುರೇಶ್ ಮೊಗವೀರ, ಅಶೋಕ್ ಶೆಟ್ಟಿ, ಜಯಶೀಲ ಶೆಟ್ಟಿ, ದೇವಕಿ ವಿ ಶೆಟ್ಟಿ, ರಾಜೇಂದ್ರ ಶೆಟ್ಟಿ, ಬಿ ಸೀತಾರಾಮ ಶೆಟ್ಟಿ ಇವರುಗಳ ಮೇಲೆ ನ್ಯಾಯವಾದಿ ಅವಿನಾಶ್ ಶೆಟ್ಟಿ ಇವರು ದಾಖಲೆಗಳ ಸಮೇತ ಲಿಖಿತ ದೂರು ನೀಡಿದ್ದು ಆ ಬಗ್ಗೆ ಕುಂದಾಪುರ ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 195/2025 ರಂತೆ ಪ್ರಕರಣ ದಾಖಲಾಗಿರುತ್ತದೆ.