ಡೈಲಿ ವಾರ್ತೆ: 28/ಅ./2025

ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ; ಹಳೆಯ ಸ್ಲೋಚ್ ಹ್ಯಾಟ್‌ಗಳಿಗೆ ಗುಡ್ ಬೈ

ಬೆಂಗಳೂರು: ರಾಜ್ಯದ ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪಿ-ಕ್ಯಾಪ್‌’ಗಳನ್ನು (P-Cap) ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿಗಳು ಇಂದಿನಿಂದಲೇ ಪೊಲೀಸರ ಕೈಸೇರಲಿವೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ, ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗ ಹೊಸ ಕ್ಯಾಪ್‌ ವಿತರಣೆ ನಡೆಯಲಿದೆ.

ಜೂನ್‌ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್‌ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ‘ಪಿ ಕ್ಯಾಪ್‌’ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಆ.7 ರಂದು ನಡೆದಿದ್ದ ಕಿಟ್‌ ನಿರ್ದಿಷ್ಟಿತಾ ಸಮಿತಿ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲಾಗಿತ್ತು. ಇದೀಗ ಹೊಸ ಟೋಪಿಗಳು ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ‘ಪಿ ಕ್ಯಾಪ್‌’ ವಿತರಣೆ ನಡೆಯಲಿದೆ.