ಡೈಲಿ ವಾರ್ತೆ: 09/NOV/2025

ನಿವೃತ್ತ ಮುಖ್ಯ ಶಿಕ್ಷಕ ಜಿ. ರಾಮಚಂದ್ರ ಐತಾಳ ಗುಂಡ್ಮಿ ರವರಿಗೆ ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:
ಕನ್ನಡಪರ ಕಾರ್ಯಕ್ರಮಗಳು ನಿರಂತರವಾಗಿ ಸಂಘಟನೆ ಗೊಳ್ಳುವುದರಿಂದ ಕನ್ನಡ ಮತ್ತಷ್ಟು ಗಟ್ಟಿಗೊಳ್ಳಲಿದೆ – ಸಂಸದ ಕೋಟ

ಕೋಟ: ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಶಿವರಾಮ ಕಾರಂತರ ಹುಟ್ಟೂರಿನಲ್ಲಿ ಕನ್ನಡಪರ ಕಾರ್ಯಕ್ರಮಗಳು ನಿರಂತರವಾಗಿ ಸಂಘಟನೆಗೊಳ್ಳುವುದರಿಂದ ಕನ್ನಡ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಲ್ಲದೆ
ಕನ್ನಡಪರ ಹೋರಾಟಕ್ಕೆ ಬೆಲೆ ಬರುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ವರುಣತೀರ್ಥ ವೇದಿಕೆ ಕೋಟ ವತಿಯಿಂದ ನ.8 ರಂದು ಶನಿವಾರ ವರುಣತೀರ್ಥ ಕೆರೆಯ ವಠಾರದಲ್ಲಿ ನಡೆದ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ನಿರಂತರ” – 2025ರ ವರುಣತೀರ್ಥ ರಾಜ್ಯೋತ್ಸವ ಪ್ರಶಸ್ತಿಯನ್ನು ನಿವೃತ್ತ ಮುಖ್ಯ ಶಿಕ್ಷಕ ಜಿ. ರಾಮಚಂದ್ರ ಐತಾಳ ಗುಂಡ್ಮಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅವರು ಮಾತನಾಡಿ ನಾವು ಈ ಹಿಂದೆ ರಾಜ್ಯದಾದ್ಯಂತ ಗೋಕಾಕ್ ಚಳುವಳಿ ನಡೆಯುವಾಗ ಡಾ. ಶಿವರಾಮ ಕಾರಂತರ ಊರಿನಲ್ಲಿ ಇಂಥ ಚಳುವಳಿ ನಡೆಯಬೇಕೆಂದು ನಾನು ಮತ್ತು ನನ್ನಾಗೆ ಇರುವ ಹತ್ತಾರು ಮಂದಿಯನ್ನು ಡಾ. ಶಿವರಾಮ ಕಾರಂತರ ಮನೆಗೆ ಕರೆದುಕೊಂಡು ಹೋದಾಗ ಕಾರಂತರು ಒಮ್ಮೆ ನಮ್ಮನ್ನು ದಿಟ್ಟಿಸಿ ನೋಡಿ ನಾವು ಬಂದ ಕಾರಣವನ್ನು ಕೇಳಿ ನಾನು ಹೋರಾಟಕ್ಕೆ ಬರಲು ಅಡ್ಡಿಲ್ಲ ಆದರೆ ನನ್ನ ವಯಸ್ಸಿನ 10 ಮಂದಿಯನ್ನು ಕರೆದುಕೊಂಡು ಬಾ ಎಂದು ಹೇಳಿದ ನೆನಪು ಇಂದಿಗೂ ನನ್ನನ್ನು ಭಾವುಕರಾಗಿಸುತ್ತದೆ ಎಂದು ಸಂಸದ ಕೋಟ ಹೇಳಿದರು.

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ಪ್ರವರ್ತಕರಾದ ಆನಂದ್ ಸಿ ಕುಂದರ್ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವರುಣತೀರ್ಥ ವೇದಿಕೆಯ ಅಧ್ಯಕ್ಷ ಉದಯ ದೇವಾಡಿಗ ವಹಿಸಿದ್ದರು.

ಸಂಘದ ಗೌರವಧ್ಯಕ್ಷರಾದ ಕೋಟ ಚರಕ ಕ್ಲಿನಿಕ್ ವೈದ್ಯರಾದ ಡಾ. ಅಶೋಕ್ ಆಚಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಪಿ.ಹೆಚ್.ಡಿ. ಸಂಶೋಧನೆ ಡಾ. ಶಮಂತ್ ಕುಮಾರ್, ನಾಟ್ಯ ಕಲಾ ಕ್ಷೇತ್ರದ ಕು. ನಿಶಾ ಸಾಲಿಗ್ರಾಮ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಪಾರಂಪಳ್ಳಿ, ಕ್ರೀಡಾ ಕ್ಷೇತ್ರದ ಈಜು ಪಟು ಎ. ಶ್ರೀಧರ ಉಳಿತ್ತಾಯ ಇವರನ್ನು ವಿಶೇಷ ಅಭಿನಂದನೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಜಿ. ಸದಾನಂದ ಗಿಳಿಯಾರು, ಮನೋ ವೈದ್ಯರಾದ ಡಾ. ಪ್ರಕಾಶ್ ತೋಳಾರ್, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ನೀಲವರ ಸುರೇಂದ್ರ ಅಡಿಗ, ಎಂ. ಸುಬ್ರಾಯ ಆಚಾರ್, ಸುಜಯೇಂದ್ರ ಹಂದೆ, ಪ್ರಸಾದ್ ಬಿಲ್ಲವ ಮೊದಲದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚಂದ್ರ ಪೂಜಾರಿ ಸ್ವಾಗತಿಸಿದರು.
ಚಂದ್ರ ಆಚಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಕಾರ್ಯದರ್ಶಿ ಉಮೇಶ್ ಕೆ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ದುರ್ಗಾ ಕಲಾ ತಂಡ ಹಾರಾಡಿ ಬ್ರಹ್ಮಾವರ ಇವರಿಂದ ಕುಂದ ಕನ್ನಡ ಹಾಸ್ಯಮಯ ನಗೆ ನಾಟಕ ಒಂದಲ್ಲಾ ಒಂದು ಸಮಸ್ಯೆ ಪ್ರದರ್ಶನಗೊಂಡಿತು.