



ಡೈಲಿ ವಾರ್ತೆ: 11/NOV/2025

ದೆಹಲಿ ನಿಗೂಢ ಸ್ಫೋಟ: ಸ್ಫೋಟಗೊಂಡ ಕಾರಿನ ನಂಬರ್ ಲಭ್ಯ, ಇಬ್ಬರ ಬಂಧನ!

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಕಾರು ಸ್ಫೋಟವು ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ.

ಸ್ಫೋಟಗೊಂಡ ಕಾರಿನ ನಂಬರ್ ಲಭ್ಯವಾಗಿದ್ದು, ಮೊಹಮ್ಮದ್ ಸಲ್ಮಾನ್ ಹೆಸರಿನಲ್ಲಿ ಕಾರು ನೋಂದಣಿಯಾಗಿರುವುದು ತಿಳಿದುಬಂದಿದೆ. ಸ್ಫೋಟಗೊಂಡ ಕಾರು ಹರಿಯಾಣ ನೋಂದಣಿ ಸಂಖ್ಯೆ HR 26 C 7674 ಅನ್ನು ಹೊಂದಿದೆ. ಈ ಐ20 ಕಾರು 2014ರಲ್ಲಿ ಹರಿಯಾಣದ ಗುರುಗ್ರಾಮದ ಶಾಂತಿನಗರದ ವಿಳಾಸದಲ್ಲಿ ಮೊಹಮ್ಮದ್ ಸಲ್ಮಾನ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿತ್ತು.

ಸಲ್ಮಾನ್ ಅವರು ತಾನು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಖ್ಲಾ ನಿವಾಸಿ ದೇವೇಂದ್ರ ಎಂಬುವವರಿಗೆ ಈ ಕಾರನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ.

ಹೀಗಾಗಿ, ಪೊಲೀಸರು ಸಲ್ಮಾನ್ ಮತ್ತು ದೇವೇಂದ್ರ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕಾರು ಮಾರಾಟವಾದರೂ ಯಾಕೆ ಮಾಲೀಕತ್ವ ವರ್ಗಾವಣೆಯಾಗಿಲ್ಲ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಡಾಗ್ ಸ್ಕ್ವಾಡ್ ತಂಡಗಳೂ ಸಹ ಸ್ಥಳದಲ್ಲಿ ಪರಿಶೀಲನೆ ನಡೆಸಿವೆ. ಸ್ಫೋಟದ ಹಿಂದಿನ ಉದ್ದೇಶ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ತೀವ್ರ ತನಿಖೆ ಮುಂದುವರೆದಿದೆ.


ಸ್ಫೋಟದ ತೀವ್ರತೆಯು ಲಾಲ್ ಕಿಲಾ ಮೆಟ್ರೋ ನಿಲ್ದಾಣಕ್ಕೂ ತೀವ್ರ ಹಾನಿಯುಂಟುಮಾಡಿದೆ. ಮೆಟ್ರೋ ನಿಲ್ದಾಣದ ಒಳಭಾಗದ ಗಾಜುಗಳು ಸ್ಫೋಟದಿಂದಾಗಿ ಪುಡಿಪುಡಿಯಾಗಿವೆ. ಘಟನಾ ಸ್ಥಳದಲ್ಲಿ ಸುಮಾರು 22ಕ್ಕೂ ಹೆಚ್ಚು ವಾಹನಗಳು, ಬೈಕ್‌ಗಳು ಮತ್ತು ಸುತ್ತಮುತ್ತಲ ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.